ಕಲ್ಲು ತೂರಾಟದ ಘಟನೆ ಬಳಿಕ ಮದ್ದೂರಿನಲ್ಲಿ ಇಂದು ಸಾಮೂಹಿಕವಾಗಿ ಗಣೇಶ ಮೂರ್ತಿಗಳನ್ನ ವಿಸರ್ಜನೆ ಮಾಡಲಾಗುತ್ತಿದೆ. ಸುಮಾರು 3 ಕಿಲೋ ಮೀಟರ್ ದೂರ ಮೆರವಣಿಗೆ ಮಾಡಿ, 28 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು, ಹಿಂದೂ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ಪಟ್ಟಣದ ಐಬಿ ಸರ್ಕಲ್ನಿಂದ ಶುರುವಾಗಿ ಪೇಟೆ ಬೀದಿ, ಕೊಲ್ಲಿ ಸರ್ಕಲ್ ಮಾರ್ಗವಾಗಿ ಮೆರವಣಿಗೆ ಸಾಗಲಿದೆ. ಬಳಿಕ ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಅಹಿತಕರ ಘಟನೆ ಸಂಭವಿಸದಂತೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಮದ್ದೂರು, ಮಳವಳ್ಳಿ, ಮಂಡ್ಯ ತಾಲೂಕಿನಲ್ಲಿ ಮದ್ಯ ಮಾರಾಟವನ್ನೇ ನಿಷೇಧಿಸಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. 7 ಎಸ್ಪಿ, ನಾಲ್ವರು ಎಎಸ್ಪಿ, 15 ಕೆಎಸ್ಆರ್ಪಿ, 10 ಡಿಎಆರ್ ತುಕುಡಿ, ರ್ಯಾಪಿಡ್ ಆಕ್ಷನ್ ಫೋರ್ಸ್ ಸೇರಿ 2 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಕ್ಷಿಣ ವಲಯದ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮಂಡ್ಯ, ಮೈಸೂರು, ಬೆಂಗಳೂರು, ಚಾಮರಾಜನಗರ, ರಾಮನಗರ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿ ಕರೆಸಲಾಗಿದೆ.
ಮದ್ದೂರು ಪಟ್ಟಣಕ್ಕಿಂದು ಬಿಜೆಪಿ ನಿಯೋಗ ಕೂಡ ಭೇಟಿ ನೀಡುತ್ತಿದೆ. ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ ಸೇರಿದಂತೆ, ಹಲವು ರಾಜ್ಯ ಮತ್ತು ಜಿಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರು ಕೂಡ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆ ಮಧ್ಯೆಯೇ ರಾಮಮಂದಿರ ಪಾರ್ಕ್ ಬಳಿ 1 ಗಂಟೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬಿಜೆಪಿ ನಾಯಕರ ಭಾಷಣಕ್ಕೂ ತಯಾರು ಮಾಡಿಕೊಳ್ಳಲಾಗಿದೆ. ಗಣೇಶ ವಿಸರ್ಜನಾ ಮೆರವಣಿಗೆಗೂ ಮುನ್ನ, ಲಾಠಿಚಾರ್ಜ್ನಲ್ಲಿ ಗಾಯಗೊಂಡವರ ಮನೆಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.