ತುಮಕೂರು ಹೆಲಿ ಟೂರ್‌ಗೆ ದುಬಾರಿ ದರ

ದಸರಾ ಸಂಭ್ರಮದಲ್ಲಿರುವ ತುಮಕೂರು ಜನರಿಗೆ, ಹೆಲಿ ಟೂರ್‌ಗೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದ್ರೆ ಹೆಲಿಕಾಪ್ಟರ್‌ನಲ್ಲಿ ಓಡಾಡಬೇಕೆಂಬ ಆಸೆ ಇಟ್ಟುಕೊಂಡಿದ್ದ ಬಡ ಜನರಿಗೆ, ದುಬಾರಿ ಟಿಕೆಟ್‌ ದರದ ಬಿಸಿ ತಟ್ಟಿದೆ.

ತುಮಕೂರು ದಸರಾದ ಪ್ರಮುಖ ಆಕರ್ಷಣೆಯೇ ಹೆಲಿ ಟೂರ್‌. ಕೇವಲ 15 ನಿಮಿಷದ ಹೆಲಿಕಾಪ್ಟರ್‌ ಪ್ರವಾಸಕ್ಕೆ, 3,900 ರೂಪಾಯಿ ದರ ನಿಗದಿಪಡಿಸಲಾಗಿದೆ. ಕುಟುಂಬದಲ್ಲಿ ಕನಿಷ್ಠ 4 ಮಂದಿ, ಒಂದು ರೌಂಡ್‌ ಹೆಲಿ ಟೂರ್‌ ಮಾಡಿ ಬರಬೇಕೆಂದ್ರೆ, 15,600 ರೂ. ಬೇಕಾಗುತ್ತದೆ. ಇದು ಬಡ ಮತ್ತು ಮಧ್ಯಮ ವರ್ಗಕ್ಕೆ ದೊಡ್ಡ ಮೊತ್ತ. ತಿಂಗಳ ಕುಟುಂಬ ನಿರ್ವಹಣೆಯ ಖರ್ಚನ್ನೇ ಮೀರುವ ಮೊತ್ತ ಇದಾಗಿದೆ.

ಇನ್ನು, ಹೆಲಿ ಟೂರ್‌ಗೆ ನಿಗದಿ ಮಾಡಿರುವ ದರದಲ್ಲಿ, ದೂರದ ನಗರಗಳಿಗೆ ಹೋಗಿ ಬರಬಹುದು. ಬೆಂಗಳೂರಿನಿಂದ ಮುಂಬೈಗೆ 3,500ರಿಂದ 4,500 ರೂಪಾಯಿ ಟಿಕೆಟ್‌ ದರ ಇದೆ. ಬೆಂಗಳೂರಿಂದ ದೆಹಲಿಗೆ 4000ದಿಂದ 5,500 ರೂಪಾಯಿ. ಬೆಂಗಳೂರಿಂದ ಚೆನ್ನೈಗೆ 1,500 ರೂ.ನಿಂದ 2,500 ರೂಪಾಯಿ ಮತ್ತು ಬೆಂಗಳೂರಿಂದ ಗೋವಾಕ್ಕೆ 2,000 ರೂ.ನಿಂದ 3,000 ರೂಪಾಯಿ ಇದೆ.

ಶ್ರೀಮಂತರು ಹಾಗೂ ಉನ್ನತ ಉದ್ಯೋಗದಲ್ಲಿ ಇರೋರಿಗೆ, ಹೆಲಿಕಾಪ್ಟರ್‌ ಪ್ರಯಾಣ ಹೊಸದಲ್ಲ. ಆದರೆ, ಗ್ರಾಮೀಣ ಭಾಗದ ಬಡ ರೈತರು, ಮಧ್ಯಮ ವರ್ಗದವರಿಗೆ, ಇದೊಂದು ಕನಸು. ಅವರನ್ನೂ ಗಮನದಲ್ಲಿಟ್ಟುಕೊಂಡು ಟಿಕೆಟ್‌ ದರ ಪರಿಷ್ಕರಿಸಬೇಕು. ಆಗ ನೋಂದಣಿಯೂ ಹೆಚ್ಚಾಗುತ್ತೆ. ಆಕಾಶದಲ್ಲಿ ಹಾರುವ ಬಡವರ ಕನಸೂ ನನಸಾಗುತ್ತದೆ.

About The Author