ವಿಧಾನಸಭಾ ಅಧಿವೇಶನದಲ್ಲಿ RSS ಗೀತೆ ಹಾಡಿ, ವಿವಾದ ಮೈಮೇಲೆ ಎಳೆದುಕೊಂಡಿದ್ದ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಿದ್ದಾಯ್ತು. ಈಗ ಗೃಹ ಸಚಿವ ಜಿ. ಪರಮೇಶ್ವರ್ ಸರದಿ. ಎಬಿವಿಪಿ ಕಾರ್ಯಕ್ರಮದಲ್ಲಿ ಪರಂ ಭಾಗಿಯಾಗಿರೋದು, ಕಾಂಗ್ರೆಸ್ ಪಕ್ಷದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆರ್‌ಎಸ್‌ಎಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್. ವೀರ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ಜಯಂತಿ ಪ್ರಯುಕ್ತ, ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಥಯಾತ್ರೆ, ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ, ಪರಮೇಶ್ವರ್ ಭಾಗಿಯಾಗಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲೇ, ಪರಮೇಶ್ವರ್ ಕಾರಿನಲ್ಲಿ ಹೋಗ್ತಿದ್ರು. ಈ ವೇಳೆ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ರಾಣಿ ಅಬ್ಬಕ್ಕ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ.
ನಮಸ್ತೆ ಸದಾ ವತ್ಸಲೇ ಗಾಯನ ಬಳಿಕ ಡಿಕೆಶಿ ವಿರುದ್ಧ, ಇಡೀ ಕಾಂಗ್ರೆಸ್ ಪಾಳಯವೇ ತಿರುಗಿಬಿದ್ದಿತ್ತು. ಹಿರಿಯರು ಕೂಡ ಕ್ಷಮೆ ಕೇಳುವಂತೆ ಆಗ್ರಹಿಸಿದ್ರು. ವಿವಾದ ಜೋರಾಗುತ್ತಿದ್ದಂತೆ ಬೇರೆ ದಾರಿ ಇಲ್ಲದೇ, ಡಿಕೆ ಶಿವಕುಮಾರ್ ಕ್ಷಮೆಯಾಚನೆ ಮಾಡಿದ್ರು. ನನಗೆ ಆರ್‌ಎಸ್‌ಎಸ್ ಗೀತೆ ಮಾತ್ರವಲ್ಲ. ಎಲ್ಲವನ್ನೂ ತಿಳಿದುಕೊಂಡಿದ್ದೀನಿ ಅಂತಾ ಸಮರ್ಥನೆ ಕೊಟ್ಟುಕೊಂಡಿದ್ರು.
ಈಗ ಪರಮೇಶ್ವರ್ ಸರದಿ. ದಲಿತರ ಪರ ಅಂತಾ ಕಾಂಗ್ರೆಸ್ಸಿಗರು ಹೇಳ್ತಿದ್ರೂ, ಸಿಎಂ ಸ್ಥಾನ ನೀಡೋಕೆ ಮಾತ್ರ ಮುಂದಾಗ್ತಿಲ್ಲ. ದಲಿತ ಸಿಎಂ ಕೂಗು ಬಹಳ ಹಿಂದಿನಿಂದಲೂ ಕೇಳಿ ಬರ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರೈಸುತ್ತಿರುವ ಹೊತ್ತಲ್ಲಿ, ಸಿಎಂ ಬದಲಾವಣೆ ಕೂಗು ಜೋರಾಗಿದೆ. ಇದೇ ಹೊತ್ತಲ್ಲಿ ಪರಮೇಶ್ವರ್ ಕೂಡ ಆಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎಬಿವಿಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಡಿಕೆಶಿ ಅವರಂತೆಯೇ ಪರಮೇಶ್ವರ್ ಅವರಿಗೂ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

