ಮದ್ದೂರಲ್ಲಿ ಘರ್ಜಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮೈಸೂರಲ್ಲಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ, ಕೇವಲ 3 ತಿಂಗಳಲ್ಲಿ ಪತನವಾಗಲಿದೆಯಂತೆ. ಹಿಂದೂ ವಿರೋಧಿ ನೀತಿಯನ್ನು ಮುಂದುವರೆಸಿಕೊಂಡು ಹೋದ್ರೆ, 2028ರವರೆಗೆ ನೀವು ಮುಖ್ಯಮಂತ್ರಿ ಆಗಿ ಇರೋದಿಲ್ಲ ಅಂತಾ, ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
ಯತ್ನಾಳ್ ಪ್ರಕಾರ, 2028ಕ್ಕೆ ದೊಡ್ಡ ಕ್ರಾಂತಿಯಾಗುತ್ತೆದೆಯಂತೆ. ಈ ಹಿಂದೆ ವೀರೇಂದ್ರ ಪಾಟೀಲರಿಗೆ 184 ಎಂಎಲ್‌ಎಗಳನ್ನು ಕೊಟ್ಟಿದ್ರು. ಈಗ ಮತ್ತೆ ಅದೇ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣವನ್ನು ಸಹಿಸೋದಿಲ್ಲ. ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೆಲ ಬಿಜೆಪಿಗರು ಹೊಂದಾಣಿಕೆ ಮಾಡಿಕೊಂಡು, ರಾಜ್ಯದಲ್ಲಿ ಬಿಜೆಪಿಯನ್ನು ಹಾಳು ಮಾಡ್ತಿದ್ದಾರೆ.
ಹಿಂದುತ್ವದ ರಕ್ಷಣೆಗಾಗಿ ಮದ್ದೂರಿನಲ್ಲಿ ಸಾವಿರಾರು ಜನರು ಸೇರಿದ್ರು. ನಾನು ಒಂದೇ ಒಂದು ರೂಪಾಯಿ ಖರ್ಚು ಮಾಡಿಲ್ಲ. ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಅವರಿಗೆ ಯತ್ನಾಳ್ ಜಾತಿ ಮುಖ್ಯವಲ್ಲ. ಹಿಂದುತ್ವ ಮುಖ್ಯ. ಯತ್ನಾಳ್ ಸನಾತನ ಧರ್ಮಕ್ಕೆ, ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡಬಹುದೆಂಬ ಭಾವನೆ, ಎಲ್ಲರಲ್ಲೂ ಇದೆ.
ಚಾಮುಂಡಿ ಆಶೀರ್ವಾದ ಪಡೆದು ಬಂದಿದ್ದೇನೆ. ಬರುವ ದಿನಗಳಲ್ಲಿ ಕರ್ನಾಟಕಕ್ಕೆ ಒಳ್ಳೆಯ ರಾಜಕಾರಣಿಗಳು ಬರಲಿ. ಭ್ರಷ್ಟರು, ಅಡ್ಜಸ್ಟ್‌ಮೆಂಟ್ ರಾಜಕಾರಣಿಗಳು ಕಿತ್ತುಹೋಗಲಿ. ಕರ್ನಾಟಕದಲ್ಲಿ ಹಿಂದೂಗಳ ಮೇಲೆ, ಹಿಂದೂ ಹಬ್ಬಗಳ ಮೇಲೆ, ಕರ್ನಾಟಕ ಸರ್ಕಾರ ದಬ್ಬಾಳಿಕೆ ಮಾಡ್ತಿದೆ. ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟವಾಗ್ತಿದೆ. ರಾಜ್ಯದೆಲ್ಲೆಡೆ ಪಾಕಿಸ್ತಾನದ ಧ್ವಜ ಹಾರಿಸೋದು, ಪಾಕಿಸ್ತಾನಕ್ಕೆ ಜೈಕಾರ ಹಾಕೋದು, ಇವೆಲ್ಲಾ ದೇಶದ್ರೋಹಿ ಕೆಲಸಗಳು.
ಹಿಂದೂ ಕಾರ್ಯಕರ್ತರು ಕರೆದ ಕಡೆಯೆಲ್ಲಾ ಹೋಗುತ್ತಿದ್ದೇನೆ . ಹೊಸ ಪಕ್ಷ ಕಟ್ಟೋದು ಖಚಿತ. 2028ಕ್ಕೆ ನಮ್ಮ ಸರ್ಕಾರ ಬರೋದು ನಿಶ್ಚಿತ. ರಾಜ್ಯದ ಜನರಿಗೆ ಒಳ್ಳೆಯ ಸರ್ಕಾರ ಕೊಡುವುದು ಸ್ಪಷ್ಟ. ಹೀಗಂತ ಮೈಸೂರಿಗೆ ಭೇಟಿ ನೀಡಿದ್ದ ವೇಳೆ, ಶಾಸಕ ಯತ್ನಾಳ್ ಭವಿಷ್ಯ ನುಡಿದ್ದಾರೆ.