ದೇಶದ ಪ್ರಾದೇಶಿಕ ರಾಜಕೀಯ ಪಕ್ಷಗಳ ಪೈಕಿ ಭಾರತೀಯ ರಾಷ್ಟ್ರ ಸಮಿತಿ BRS 685.5 ಕೋಟಿ ರೂಪಾಯಿಗಳ ಆದಾಯದೊಂದಿಗೆ ಅಗ್ರಸ್ಥಾನವನ್ನು ಗಳಿಸಿದೆ. ಹೀಗಂತ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ತಿಳಿಸಿದೆ.
ಈ ಪೈಕಿ TDP 2023-24ರ ಹಣಕಾಸು ವರ್ಷದಲ್ಲಿ ತೀವ್ರ ಆದಾಯ ಏರಿಕೆಯನ್ನು ದಾಖಲಿಸಿದೆ. 285.07 ಕೋಟಿ ರೂ. ಗಳಿಸಿ ದೇಶದ ನಾಲ್ಕನೇ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಅಧಿಕಾರಕ್ಕೆ ಬಂದ TDP, 2022-23ರ ಹಣಕಾಸು ವರ್ಷದಲ್ಲಿ 63.9 ಕೋಟಿ ರೂ. ಗಳಿಸಿದ್ದನ್ನು ಹೋಲಿಸಿದರೆ, ಅದು ಮೂರರಷ್ಟು ಹೆಚ್ಚಳವಾಗಿದೆ.
ಈ ಮೂಲಕ ದಾಖಲಾದ ದೇಣಿಗೆಗಳ ಸಂಖ್ಯೆಯಲ್ಲಿ TDP ಅಗ್ರಸ್ಥಾನದಲ್ಲಿಯೂ ಇದೆ ಅಂತ ವರದಿ ಉಲ್ಲೇಖಿಸಿದೆ. YSR ಕಾಂಗ್ರೆಸ್ ಪಾರ್ಟಿ ಕೂಡ ತನ್ನ ಆದಾಯದಲ್ಲಿ ಏರಿಕೆ ಕಂಡಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.6 ಪಟ್ಟು ಹೆಚ್ಚಾಗಿ 191 ಕೋಟಿ ರೂ. ಗಳಿಸಿದೆ.
ಇನ್ನು ಬೇರೆ ಬೇರೆ ಪ್ರಮುಖ ಪ್ರಾದೇಶಿಕ ಪಕ್ಷಗಳ ಆದಾಯಗಳ ಬಗ್ಗೆ ನೋಡೋದಾದ್ರೆ ಭಾರತೀಯ ರಾಷ್ಟ್ರ ಸಮಿತಿ ₹685.5 ಕೋಟಿ ಆದಾಯ ಮಾಡಿ ಅಗ್ರಸ್ಥಾನದಲ್ಲಿದೆ. ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ₹646 ಕೋಟಿ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. BJD ₹297 ಕೋಟಿ, TDP ₹285.07 ಕೋಟಿ, YSR ಕಾಂಗ್ರೆಸ್ ಪಾರ್ಟಿ ₹191 ಕೋಟಿ ಆದಾಯದೊಂದಿಗೆ ನಂತರದ ಸ್ಥಾನದಲ್ಲಿವೆ.
ಈ ಮದ್ಯೆ ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸ್ಥಾಪಿಸಿದ ಜನ ಸೇನಾ ಪಕ್ಷ 2023-24ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಆದಾಯ ಹಾಗೂ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ ಎಂಬುದು ಗಮನಸೆಳೆಯುವ ಸಂಗತಿ. 2013ರಲ್ಲಿ ಸ್ಥಾಪಿತವಾದ ಈ ಪಕ್ಷ 2019 ಮತ್ತು 2024ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಆರ್ಥಿಕ ಲೆಕ್ಕಪತ್ರಗಳ ವಿವರಗಳಿಲ್ಲ.
ADR ವರದಿಯ ಪ್ರಕಾರ, 40 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ ₹1,796 ಕೋಟಿ ಆಗಿದೆ. ಇದರ ಶೇಕಡಾ 70ಕ್ಕೂ ಹೆಚ್ಚು ದೇಣಿಗೆಗಳು ಚುನಾವಣಾ ಬಾಂಡ್‌ಗಳ ಮೂಲಕ ಬಂದಿವೆ. 2024ರ ಚುನಾವಣೆಗಳಲ್ಲಿ ಟಿಡಿಪಿ ₹121 ಕೋಟಿ ಮತ್ತು YSRCP ₹295 ಕೋಟಿ ವೆಚ್ಚಮಾಡಿದ್ದವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ : ಲಾವಣ್ಯ ಅನಿಗೋಳ




