ಹಾಸನ ಜಿಲ್ಲೆಯಲ್ಲಿ ಸೆಪ್ಟೆಂಬರ್ 12ರ ರಾತ್ರಿ, ಜವರಾಯ ಮರಣ ಮೃದಂಗ ಬಾರಿಸಿದ್ದ. ರಾಷ್ಟ್ರೀಯ ಹೆದ್ದಾರಿ 373ರ ಬಳಿ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿತ್ತು. ನೂರಾರು ಜನರು, ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ಹೊರಟಿದ್ರು. ಪ್ರತಿ ವರ್ಷದಂತೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪಕ್ಕದಲ್ಲೇ ಗಣಪತಿ ಕೂರಿಸಲಾಗಿತ್ತು. ಹೀಗಾಗಿ ಮೆರವಣಿಗೆಯಲ್ಲಿ ಹಲವು ವಿದ್ಯಾರ್ಥಿಗಳೂ ಭಾಗಿಯಗಿದ್ರು. ಕುಣಿದು ಕುಪ್ಪಳಿಸುತ್ತಾ ಮೆರವಣಿಗೆಯಲ್ಲಿ ಸಾಗ್ತಿದ್ರು. ಈ ವೇಳೆ ಯಮಸ್ವರೂಪಿ ಟ್ರಂಕ್ ಹರಿದ ಪರಿಣಾಮ, ಸ್ಥಳದಲ್ಲಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ರಾತ್ರಿ ಸುಮಾರು 8.30ರಲ್ಲಿ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ 6 ಮಂದಿ ಸ್ಥಳೀಯರು, ಮೂವರು ವಿದ್ಯಾರ್ಥಿಗಳಿದ್ದಾರೆ. ಬಳ್ಳಾರಿ ನಿವಾಸಿ ಅಂತಿಮ ಬಿಇ ವಿದ್ಯಾರ್ಥಿ ಪ್ರವೀಣ್, ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿ ಕೆ.ಬಿ.ಪಾಳ್ಯ ನಿವಾಸಿ ರಾಜೇಶ್, ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ್, ಮುತ್ತಿಗೆಹೀರಳ್ಳಿ ನಿವಾಸಿ ಗೋಕುಲ್, ಕಬ್ಬಿನಹಳ್ಳಿ ನಿವಾಸಿಗಳಾದ ಕುಮಾರ್, ಪ್ರವೀಣ್, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗವಿ ಗಂಗಾಪುರ ನಿವಾಸಿ ಮಿಥುನ್, ಚಿಕ್ಕಮಗಳೂರು ಜಿಲ್ಲೆಯ ಮಾಣೇನಹಳ್ಳಿ ನಿವಾಸಿ-ಬಿಇ ವಿದ್ಯಾರ್ಥಿ ಸುರೇಶ್, ಹಾಸನ ತಾಲೂಕಿನ ಬಂಟರಹಳ್ಳಿ ಗ್ರಾಮದ ಪ್ರಭಾಕರ್ ಮೃತಪಟ್ಟಿದ್ದಾರೆ.
ಹೆದ್ದಾರಿಯ ಒಂದು ರಸ್ತೆಯನ್ನು ಬಂದ್ ಮಾಡಿದ್ದು, ಮತ್ತೊಂದು ಭಾಗದಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮೊದಲು ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ, ಮುಂದೆ ಸಾಗುತ್ತಿದ್ದ ಬೈಕ್‌ಗೆ ಟ್ರಕ್ ಗುದ್ದಿದೆ. ಬಳಿಕ ಮೆರವಣಿಗೆಯಲ್ಲಿ ಸಾಗುತ್ತಿದ್ದವರ ಮೇಲೆ ಹರಿದಿದೆ. ಏನಾಗ್ತಿದೆ ಅಂತಾ ತಿಳಿಯುವಷ್ಟರಲ್ಲಿ 9 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಚಾಲಕನ ನಿರ್ಲಕ್ಷ್ಯವೇ ಕಾರಣಾ ಅಂತಾ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹೇಳಿದ್ದಾರೆ. ಘಟನೆ ಬಳಿಕ ಚಾಲಕ ಭುವನೇಶ್‌ಗೆ, ಜನರೆಲ್ಲಾ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೊಲೀಸರ ಜೊತೆ ಘಟನಾ ಸ್ಥಳಕ್ಕೆ ಸೋಕೋ ಟೀಮ್ ಕೂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ. ಇನ್ನು, 25 ಮಂದಿಗೆ ಗಂಭೀರ ಗಾಯಗಳಾಗಿವೆ. 18 ಜನರಿಗೆ ಹಾಸನದ ಹಿಮ್ಸ್‌ನಲ್ಲಿ, 7 ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.