ಹಾಸನ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ, 9 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಮೃತಪಟ್ಟವರಲ್ಲಿ 8 ಮಂದಿ ಯುವಕರು. ಓರ್ವ ವ್ಯಕ್ತಿಗೆ 55 ವರ್ಷವಾಗಿತ್ತು. ಮನೆಗೆ ಆಧಾರವಾಗಬೇಕಿದ್ದವರು ಸಾವಿನ ಕದ ತಟ್ಟಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕಣ್ಣೀರ ಕಥೆ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮನೆಗೆ ಆಧಾರವಾಗಬೇಕಿತ್ತು. ಯಮಸ್ವರೂಪಿ ಟ್ರಕ್ ಯುವಕರ ಬದುಕನ್ನೇ ಅಂತ್ಯಗೊಳಿಸಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗವಿ ಗಂಗಾಪುರ ನಿವಾಸಿ ಮಿಥುನ್.
ವಯಸ್ಸು 22 ವರ್ಷ. ಹೊಳೆನರಸೀಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ರಾತ್ರಿಯಷ್ಟೇ ತನ್ನ ಬರ್ತಡೇ ಆಚರಿಸಿಕೊಂಡಿದ್ದ. ಸ್ನೇಹಿತರು ಕೇಕ್‌ಕಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಬಳಿಕ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಭಾಗಿಯಾಗಿದ್ರು. ಮಿಥುನ್ ಪಾಲಿಗೆ ಹುಟ್ಟಿದ ಹಬ್ಬದ ದಿನವೇ ಡೆತ್ ಡೇ ಆಗಿಬಿಟ್ಟಿದೆ.
ನಿನ್ನೆ ಮಿಥುನ್ ಊರಲ್ಲಿ ಹಬ್ಬ ಇತ್ತಂತೆ. ಮಗನಿಗೆ ಫೋನ್ ಮಾಡಿದ್ದ ಅಪ್ಪ, ಹಬ್ಬಕ್ಕೆ ಮನೆಗೆ ಬಾ ಅಂತಾ ಹೇಳಿದ್ರು. ಆದರೆ ಮಿಥುನ್ ಆರ್ಕೆಸ್ಟ್ರಾ ಇದೆ. ಗಣೇಶ ಮೆರವಣಿಗೆ ನೋಡ್ಕೊಂಡು ಬರ್ತೀನಿ ಅಂತೇಳಿದ್ದ. ಆದ್ರೆ, ವಿಧಿಯಾಟಕ್ಕೆ ಈತನೂ ಬಲಿಯಾಗಿದ್ದಾನೆ. ಮನೆಗೆ ಬರ್ತೀನಿ ಅಂದಿದ್ದ ಮಗ ಈಗ ಬದುಕಿಲ್ಲ ಅಂತಾ, ತಂದೆ ರವಿ ಎದೆಯೊಡೆದುಕೊಂಡು ಗೋಳಾಡ್ತಿದ್ದಾರೆ.
ಇದೇ ಘಟನೆಯಲ್ಲಿ ಮಿಥುನ್ ಸ್ನೇಹಿತ ಸುರೇಶ್ ಕೂಡ ಸಾವನ್ನಪ್ಪಿದ್ದಾನೆ. ಮೊಸಳೆ ಹೊಸಹಳ್ಳಿಯ ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿದ್ದರು. ಕೇವಲ 4 ತಿಂಗಳು ಕಳೆದಿದ್ರೆ, ಕೋರ್ಸ್ ಮುಗಿಯುತ್ತಿತ್ತು.
ಹಾಸ್ಟೆಲ್‌ನಲ್ಲಿ ಸುರೇಶ್, ಮಿಥುನ್ ಒಳ್ಳೆಯ ನಡವಳಿಕೆಗಳಿಂದ ಗುರುತಿಸಿಕೊಂಡಿದ್ರು. ಇಬ್ಬರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂತಾ, ಹಾಸ್ಟೆಲ್ ಸಿಬ್ಬಂದಿ ಭಾವುಕರಾಗಿದ್ದಾರೆ.
ಇನ್ನು, ಸುರೇಶ್ ಮೃತದೇಹ, ಚಿಕ್ಕಮಗಳೂರು ಜಿಲ್ಲೆಯ ಮಾಣೇನಹಳ್ಳಿಗೆ ತಲುಪಿದೆ. ಸುರೇಶ್ ಮೃತದೇಹ ನೋಡಿ, ಕುಟುಂಬಸ್ಥರ ದುಖಃದ ಕಟ್ಟೆಯೊಡೆದಿತ್ತು. ಬಿಜೆಪಿಗ ಸಿ.ಟಿ. ರವಿ ಕೂಡ, ಸುರೇಶ್ ಮನೆಗೆ ಹೋಗಿ, ಅಂತಿಮ ದರ್ಶನ ಪಡೆದಿದ್ದಾರೆ.


