ಹಾಸನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಭೇಟಿ ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಬೆನ್ನಲ್ಲೇ ನಗರಕ್ಕೆ ದೌಡಾಯಿಸಿದ್ದು, ಘಟನೆ ಸಂಬಂಧ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರನ್ನ ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ರು. ಚಿಕಿತ್ಸಾ ವೆಚ್ಚವನ್ನ ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಅಂತಾ ಭರವಸೆ ನೀಡಿದ್ದಾರೆ.
ಇನ್ನು, ಶಾಂತಿಗ್ರಾಮದ ಸರ್ಕಾರಿ ಶಾಲೆಯಲ್ಲಿ, ಸಂಸದ ಶ್ರೇಯಸ್ ಪಟೇಲ್, ಡಿಸಿ, ಎಸ್‌ಪಿ, ಜಿಲ್ಲಾ ಪಂಚಾಯಿತಿ ಸಿಇಒ ಜೊತೆ ತುರ್ತು ಸಭೆ ನಡೆಸಿದ್ದಾರೆ. ಬಳಿಕ ಬಂಟರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಮೃತ ಪ್ರಭಾಕರ್ ಅಂತಿಮ ದರ್ಶನ ಮಾಡಿದ್ರು. ಪ್ರಭಾಕರ್ ಕುಟುಂಬಸ್ಥರಿಗೆ ಸಚಿವ ಕೃಷ್ಣಾಬೈರೇಗೌಡ ಸಾಂತ್ವಾನ ಹೇಳಿದ್ದಾರೆ.
ಬಳಿಕ ಮಾತನಾಡಿರುವ ಕೃಷ್ಣಬೈರೇಗೌಡ, ಈ ಘಟನೆಗೆ ಕೋಮು ಬಣ್ಣ ನೀಡುವ ಪ್ರಯತ್ನ ಸರಿಯಲ್ಲ. ಇದು ಕಾನೂನು ಪ್ರಕಾರ ಅಪರಾಧ. ಸುಳ್ಳು ಸುದ್ದಿ ಹಬ್ಬಿಸುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು ಅಂತಾ ವಾರ್ನ್ ಮಾಡಿದ್ದಾರೆ. ಆರೋಪಿ ಟ್ರಕ್ ಚಾಲಕ ಭುವನೇಶ್ ನಿರ್ಲಕ್ಷ್ಯವೇ ದುರಂತಕ್ಕೆ ಮುಖ್ಯ ಕಾರಣ. ಟ್ರಕ್ ಚಾಲಕ ಓರ್ವ ಮುಸ್ಲಿಂ ಎಂಬ ರೀತಿಯಲ್ಲಿ ಬಿಂಬಿಸುತ್ತಾ, ಕೆಲ ವಿಪಕ್ಷದವರು ಕೋಮು ಬಣ್ಣ ನೀಡುತ್ತಿರುವುದು ಕಂಡುಬಂದಿದೆ.
ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಇಂತಹ ದುರ್ವರ್ತನೆ, ಕಾನೂನು ರೀತಿಯಲ್ಲಿ ಅಪರಾಧ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆಯನ್ನು ನೀಡಿದ್ದಾರೆ

