ರಾಜ್ಯ ರಾಜಕಾರಣದಲ್ಲಿ ಭಾರೀ ಚಟುವಟಿಕೆಗಳ ನಡುವೆ ಬಿಜೆಪಿಯ ಸಂಘಟಿತ ಹೋರಾಟಗಳು ಜೆಡಿಎಸ್ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡಿವೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಲಾಟೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಕೇಸರಿ ಶಕ್ತಿ ಪ್ರದರ್ಶನ ನಡೆಸಿದೆ. ಈಗ ಇದು ಜೆಡಿಎಸ್ಗೆ ತಲೆನೋವಾಗಿ ಪರಿಣಮಿಸಿದೆ.
ಚುನಾವಣಾ ಮೈತ್ರಿಯ ಬೆನ್ನಲ್ಲೇ ಬಿಜೆಪಿ ಇದೀಗ ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಕೈ ಹಾಕಿದೆ. ‘ಚಾಮುಂಡಿ ಚಲೋ’, ‘ಧರ್ಮಸ್ಥಳ ಚಲೋ’ ಹೀಗೆ ವಿವಿಧ ಹೋರಾಟಗಳಿಂದ ರಾಜ್ಯದ ಗಮನ ಸೆಳೆಯುತ್ತಿದೆ. ಈ ಮಧ್ಯೆ, ಮಂಡ್ಯವನ್ನು ತನ್ನ ಭದ್ರಕೋಟೆಯಾಗಿ ಬಿಂಬಿಸಿಕೊಂಡಿದ್ದ ಜೆಡಿಎಸ್ ಇದೀಗ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಆತಂಕಕ್ಕೊಳಗಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದ ನಂತರ, ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ ಮಂಡ್ಯದಿಂದ ಗೆಲುವು ದಾಖಲಿಸಿದರು. ಆದರೂ, ಬಿಜೆಪಿ ಈ ಪ್ರದೇಶದಲ್ಲಿ ಹೋರಾಟದ ಮೈತ್ರಿಕತೆಯ ನಡುವೆಯೇ ತನ್ನ ಪ್ರಭಾವ ಹೇರಲು ಯತ್ನಿಸುತ್ತಿರುವುದು ಜೆಡಿಎಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.
ಬಿಜೆಪಿಯ ಮದ್ದೂರಿನ ಗಲಾಟೆ ಆಧಾರಿತ ಹೋರಾಟದ ಬಳಿಕ ಜೆಡಿಎಸ್ ನಾಯಕರು ಕೂಡ ಸ್ಥಳಕ್ಕೆ ತೆರಳಿದರು. ಆದ್ರೂ ಬಿಜೆಪಿಯ ಕೇಸರಿ ಹೋರಾಟ ಹೆಚ್ಚು ಗಮನ ಸೆಳೆದಿತ್ತು. ಇದರಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ಪಕ್ಷದ ಮುಖಂಡರ ಮೇಲೆ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ, ಜೆಡಿಎಸ್ ಇದೀಗ ಮದ್ದೂರು ಗಲಾಟೆ, ಧರ್ಮಸ್ಥಳ ಬುರುಡೆ ಪ್ರಕರಣ ಹಾಗೂ ಚಾಮುಂಡಿ ಬೆಟ್ಟ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಮುಂದೆ ಇಟ್ಟುಕೊಂಡು ಜನಜಾಗೃತಿ ಅಭಿಯಾನ ನಡೆಸಲು ತೀರ್ಮಾನಿಸಿದೆ.
ಇದಕ್ಕಾಗಿ ಜನಜಾಗೃತಿ ಸಮಾವೇಶವೋ, ಪಾದಯಾತ್ರೆಯೋ ಅಥವಾ ಬೈಕ್ ರ್ಯಾಲಿಯೋ ನಡೆಸಬೇಕೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಪಾದಯಾತ್ರೆ ನಡೆಸುವ ಯೋಜನೆ ಕೈಬಿಡಲಾಗಿತ್ತು. ಆದರೆ, ಈಗ ಮಂಡ್ಯ ಜೆಡಿಎಸ್ ನಾಯಕರು ಪಕ್ಷದ ಶಕ್ತಿ ಪ್ರದರ್ಶನದ ಅಗತ್ಯತೆಯನ್ನು ಒತ್ತಿ ಹೇಳುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಮೇಲೂ ಹೋರಾಟಕ್ಕೆ ಸಿದ್ಧತೆ ಕೈಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ.
ಜೆಡಿಎಸ್ ನಾಯಕರು ಶೀಘ್ರದಲ್ಲೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಹಳೆ ಮೈಸೂರು ಭಾಗದಲ್ಲಿ ಬಲವರ್ಧನೆಗಾಗಿ ಜೆಡಿಎಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಬೃಹತ್ ಹೋರಾಟಗಳನ್ನು ರೂಪಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ

