ನಾಳೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಇತ್ತಿಚೆಗೆ ಅಭಿಮಾನಿಗಳ ಹಾಗೂ ಹಲವಾರು ನಟ ನಟಿಯರ ಬೇಡಿಕೆಯಂತೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂಬುದು ಅಭಿಮಾನಿಗಳಿಗೆ ಸಂತೋಷದ ವಿಷಯ. ಆದರೆ, ಅಭಿಮಾನ್ ಸ್ಟುಡಿಯೋದಲ್ಲಿದ್ದ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮಗೊಳಿಸಿರುವುದು ನೋವುಂಟುಮಾಡಿದ ಘಟನೆ. ಇದೇ ವೇಳೆ, ಹುಟ್ಟುಹಬ್ಬದ ಸಂಭ್ರಮವನ್ನು ಎಲ್ಲಿ ಆಚರಿಸುವುದು ಎಂಬ ಪ್ರಶ್ನೆ ಅಭಿಮಾನಿಗಳ ಮುಂದೆ ನಿಂತಿದೆ.
ಹುಟ್ಟುಹಬ್ಬವನ್ನು ಪ್ರತೀ ವರ್ಷ ಆಚರಿಸಲಾಗುತ್ತಿದ್ದ ಅಭಿಮಾನ್ ಸ್ಟುಡಿಯೋ ಈ ಬಾರಿ ಲಭ್ಯವಿಲ್ಲ. ಹೈಕೋರ್ಟ್ನ ಆದೇಶದಂತೆ ಸ್ಟುಡಿಯೋದಲ್ಲಿ ಯಾವುದೇ ರೀತಿಯ ಕಾರ್ಯಕ್ರಮಕ್ಕೆ ಅವಕಾಶ ಸಿಗಲಿಲ್ಲ. ಇದರಿಂದ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿದರೂ, ಹುಟ್ಟುಹಬ್ಬದ ಸಂಭ್ರಮವನ್ನು ನಿಲ್ಲಿಸದೆ ಪರ್ಯಾಯ ಜಾಗದಲ್ಲಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಡಿದ್ದು, ಅಭಿಮಾನಿಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೊಸ ಜಾಗವನ್ನು ವ್ಯವಸ್ಥೆ ಮಾಡಿದ್ದೇವೆ. ಅಭಿಮಾನಿಗಳು ಯಾವುದೇ ಅಡಚಣೆ ಇಲ್ಲದೆ ಭಾಗವಹಿಸಬಹುದು. ಅಲ್ಲದೆ ಮುಂದಿನ ವರ್ಷ ಇಂತಹ ತೊಂದರೆಗಳು ಬಾರದಂತೆ ಶಾಶ್ವತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದೇವೆ. ಹೀಗಾಗಿ ಸ್ಥಳ ಬದಲಾಗಿದ್ದರೂ ಹುಟ್ಟುಹಬ್ಬದ ನೆನಪು, ಗೌರವ ಮತ್ತು ಉತ್ಸಾಹ ಎಂದಿನಂತೆಯೇ ಇರಲಿದೆ ಎಂದು ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ