ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ದಿನ ಅರಮನೆಯಿಂದ ಬನ್ನಿಮಂಟಪ ಮೈದಾನವರೆಗೆ ಸಾಗುವ ಮಾರ್ಗದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ.
ನಗರದ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಸ್ತೆ ಎರಡೂ ಬದಿಯ ಹಳೆಯ ಹಾಗೂ ಶಿಥಿಲ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಪರಿಶೀಲಿಸಿತು. ಕಟ್ಟಡ ಮಾಲೀಕರಿಗೆ ಕಟ್ಟಡಗಳ ಮೇಲ್ಛಾವಣಿ, ಟೆರೆಸ್, ಅಥವಾ ಅಸುರಕ್ಷಿತ ಜಾಗಗಳಲ್ಲಿ ಸಾರ್ವಜನಿಕರು ನಿಂತು ವೀಕ್ಷಣೆ ಮಾಡಲು ಬಿಡಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಜನಸಂದಣಿ ನಿಯಂತ್ರಣದ ಮಾನದಂಡದಂತೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಕೂಡ ಸ್ಥಳ ಪರಿಶೀಲನೆಗೆ ತೆರಳಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರು. ಲ್ಯಾನ್ ಸ್ಟೋನ್ ಬಿಲ್ಡಿಂಗ್, ಕೆ.ಆರ್. ವೃತ್ತದ ಹಳೆಯ ಕಟ್ಟಡಗಳು, ದೇವರಾಜ ಮಾರುಕಟ್ಟೆ, ಪಂಚಮುಖಿ ವೃತ್ತದ ಕಟ್ಟಡಗಳು ಮತ್ತು ಹಾರ್ಸ್ ಸ್ಟ್ಯಾಂಡ್ಗಳನ್ನು ಅಪಾಯಕಾರಿ ಕಟ್ಟಡಗಳೆಂದು ಗುರುತಿಸಲಾಗಿದೆ. ಜಂಬೂಸವಾರಿ ಸಂದರ್ಭದಲ್ಲಿ ಸಾವಿರಾರು ಜನರ ಸುರಕ್ಷತೆ ದೃಷ್ಟಿಯಿಂದ ಕಟ್ಟಡಗಳ ಮೇಲೆ ಏರಲು ಅವಕಾಶ ನೀಡಬಾರದು ಎಂದು ಕಟ್ಟಡ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

