Friday, November 28, 2025

Latest Posts

13 ಭಾಗಗಳಲ್ಲಿ ವಿಸರ್ಜನೆ : ಮೈಸೂರು ಸಿಂಹಾಸನದ ಅಚ್ಚರಿಯ ಕಥೆ

- Advertisement -

ಮೈಸೂರು ಅರಮನೆ ದರ್ಬಾರ್ ಹಾಲಿನಲ್ಲಿ ಇಂದು ನವರಾತ್ರಿ ಪೂಜಾ ಕೈಂಕರ್ಯದ ಅಂಗವಾಗಿ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜೋಡಿಸಲಾಯಿತು. ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಮತ್ತು ಗೆಜ್ಜೆಗಳ್ಳಿಯ ನಿಪುಣರು ಈ ಕಾರ್ಯವನ್ನು ನೆರವೇರಿಸಿದರು. ಇದಕ್ಕೂ ಮುನ್ನ ಗಣಪತಿ ಹೋಮ, ಚಾಮುಂಡಿ ದೇವಿಯ ಪೂಜೆ ಹಾಗೂ ಹವನಗಳನ್ನು ನಡೆಸಲಾಗಿದ್ದು, ನಂತರ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ಹೊರತೆಗೆದು ಜೋಡಿಸಲಾಯಿತು. ಈ ಸಂದರ್ಭ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿತವಾಗಿತ್ತು.

ನವರಾತ್ರಿಯ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರ ಗಮನಕ್ಕೆ ಬರುವ ಈ ಸಿಂಹಾಸನ ರಾಜವಂಶದ ಆಸ್ತಿಯಾಗಿದ್ದು, ಪಾರಂಪರ್ಯವಾಗಿ ಗೆಜ್ಜೆಗಳ್ಳಿಯವರು ಇದನ್ನು ಜೋಡಿಸುತ್ತಾರೆ. ಜೋಡಣೆ ನಂತರ ಪೂಜೆ ಸಲ್ಲಿಸಿ ಸಿಂಹಾಸನವನ್ನು ಪರದೆಯಿಂದ ಮುಚ್ಚಲಾಗುತ್ತದೆ. ಸೆಪ್ಟೆಂಬರ್ 22ರಂದು ದಸರಾ ಉದ್ಘಾಟನೆಯ ದಿನ ಯದುವೀರ್ ಒಡೆಯರ್ ಶುಭಮಹೂರ್ತದಲ್ಲಿ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ನವರಾತ್ರಿಯ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಸಂಜೆ ಸಮಯದಲ್ಲಿ ಖಾಸಗಿ ದರ್ಬಾರ್ ನಡೆಯುತ್ತದೆ. ವಿಜಯದಶಮಿಯಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಜವಂಶಸ್ಥರ ನವರಾತ್ರಿ ಸಂಭ್ರಮ ಸಂಪೂರ್ಣಗೊಳ್ಳುತ್ತದೆ. ಬಳಿಕ ಅಕ್ಟೋಬರ್ 31ರಂದು ಸಿಂಹಾಸನವನ್ನು 13 ಭಾಗಗಳಾಗಿ ವಿಸರ್ಜಿಸಿ ಮತ್ತೆ ನೆಲಮಾಳಿಗೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ.

ಸಿಂಹಾಸನ ಜೋಡಣೆಯು ವಿಶೇಷ ವಿಧಾನವನ್ನು ಹೊಂದಿದ್ದು, ಆಸನ, ಮೆಟ್ಟಿಲು ಹಾಗೂ ಛತ್ರಿ ಮೊದಲಾದವು ಪ್ರತ್ಯೇಕ ಭಾಗಗಳಾಗಿ ಜೋಡಿಸಲಾಗುತ್ತದೆ. ಮೊದಲ ದಿನ ಪೂಜೆ ಬಳಿಕ ಸಿಂಹದ ಆಕೃತಿಯನ್ನು ಜೋಡಿಸಿದಾಗ ಮಾತ್ರ ಸಿಂಹಾಸನ ಸಂಪೂರ್ಣ ರೂಪ ಪಡೆಯುತ್ತದೆ. ಈ ಸಾಂಪ್ರದಾಯಿಕ ವಿಧಿಯಲ್ಲಿ ಪಟ್ಟದ ಆನೆಗಳು, ಹಸು, ಕುದುರೆಗಳು ಸಹ ಪಾಲ್ಗೊಳ್ಳುತ್ತವೆ. ಈ ಬಾರಿ ಶ್ರೀಕಂಠ ಮತ್ತು ಏಕಲವ್ಯ ಆನೆಗಳನ್ನು ಪಟ್ಟದ ಆನೆಗಳಾಗಿ ಆಯ್ಕೆ ಮಾಡಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss