Friday, November 14, 2025

Latest Posts

ನಾನು ಸಿಎಂ ಆದ್ರೆ JCBಯಲ್ಲೇ ಪ್ರಮಾಣ ವಚನ:3 ಮಕ್ಕಳು ಇರೋರಿಗೆ ಉಚಿತ ಸೌಲಭ್ಯ – ಯತ್ನಾಳ್

- Advertisement -

ಧರ್ಮ ಜಾಗೃತಿ ಸಮಾವೇಶದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಭಾಷಣ ಮಾಡಿ ರಾಜ್ಯ ರಾಜಕೀಯದ ಮೇಲೆ ಕಿಡಿಕಾರಿದ್ದಾರೆ. ಚನ್ನಗಿರಿಯ ಮಾಜಿ ಶಾಸಕ ಮಾಡಾಳ್ ಕುಟುಂಬವನ್ನು ಪರೋಕ್ಷವಾಗಿ ಗುರಿಯಾಗಿಸಿ, ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ, ಈಶ್ವರಪ್ಪ, ಬೊಮ್ಮಾಯಿ, ಅರಗ ಜ್ಞಾನೇಂದ್ರ ಸೇರಿದಂತೆ ಅನೇಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ತಂದೆ-ಮಗ ಇಬ್ಬರೂ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಯತ್ನಾಳ್, ತಮ್ಮ ಹಿರಿತನ ನೋಡಿದರೆ ತಾವೇ ಸಿಎಂ ಆಗಬೇಕಿತ್ತು ಎಂದು ಹಿಗ್ಗಾಮುಗ್ಗ ಹೇಳಿದರು. ರಾಜ್ಯದಲ್ಲಿ ಉಚ್ಚಾಟನೆಗೊಂಡವರು ಸಿಎಂ ಆಗಿದ್ದಾರೆ, ನಾನೇಕೆ ಆಗಬಾರದು? ಎಂದು ಪ್ರಶ್ನಿಸಿದರು. ವೀರಶೈವ-ಲಿಂಗಾಯತ ಒಂದೇ ಎಂಬ ಹೇಳಿಕೆಯನ್ನು ಪ್ರಶ್ನಿಸಿ, ಕೆಲವರು ತಮ್ಮ ರಾಜಕೀಯಕ್ಕಾಗಿ ಸಮಾಜವನ್ನು ಬಳಸುತ್ತಿದ್ದಾರೆ ಎಂದು ದೂಷಿಸಿದರು.

ಬೊಮ್ಮಾಯಿ ಸರ್ಕಾರದಲ್ಲಿ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣದಲ್ಲಿ ವೈಫಲ್ಯವಾಯಿತು ಎಂದು ಟೀಕಿಸಿದ ಅವರು, ನಾಳೆ ನಾನು ಸಿಎಂ ಆದರೆ ಜೆಸಿಬಿಯೊಂದಿಗೆ ಪ್ರಮಾಣವಚನ ಸ್ವೀಕರಿಸುವೆ, ಗಣೇಶ ಮೆರವಣಿಗೆಯಲ್ಲಿ ಜೆಸಿಬಿಯನ್ನು ಮುಂದಿಡುವೆ ಎಂದು ವ್ಯಂಗ್ಯವಾಡಿದರು. ವಿಜಯಪುರದಲ್ಲಿ ಡಿಜೆಗೆ ಪರವಾನಿಗೆ ಇದೆ, ಆದರೆ ರಾಜ್ಯದ ಬೇರೆಡೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದೆ ಯೋಗಿ ಆದಿತ್ಯನಾಥ್ ಮಾದರಿಯ ನಿರ್ಧಾರಕಾರಿ ನಾಯಕತ್ವ ಬರುತ್ತದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮುಸ್ಲಿಂರ ಓಲೈಕೆ ಮಾಡುತ್ತಿದ್ದಾರೆ, ಆದರೆ ಡಿ.ಕೆ. ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಡುವುದಿಲ್ಲ ಎಂದರು. ಹಿಂದೂ ಜನಸಂಖ್ಯೆ ಹೆಚ್ಚಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಯತ್ನಾಳ್, ನಾನು ಸಿಎಂ ಆದ್ರೆ ಮೂವರು ಮಕ್ಕಳು ಇರುವವರಿಗೆ ಎಲ್ಲಾ ಉಚಿತ ಸೌಲಭ್ಯ, ಮದುವೆಗೆ ಐದು ಲಕ್ಷ ರೂಪಾಯಿ ಸಹ ನೀಡುತ್ತೇನೆ ಎಂದು ಘೋಷಿಸಿದರು. ಅವರ ಈ ಭಾಷಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.‌

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss