ಸಾಹಸಸಿಂಹ, ನಟರತ್ನ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಂಗವಾಗಿ, ಉಳ್ಳೂರು ಗೇಟ್ ಬಳಿ ನಿರ್ಮಿಸಲಾದ ವಿಷ್ಣು ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್, ಮಗಳು ಕೀರ್ತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ ಹಾಗೂ ನೂರಾರು ಅಭಿಮಾನಿಗಳು ಸ್ಮಾರಕಕ್ಕೆ ಆಗಮಿಸಿ, ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಗುರುವಾರ ಬೆಳಗಿನ ಜಾವದಿಂದಲೇ ತಂಡೋಪ ತಂಡವಾಗಿ ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಸಂಭ್ರಮಿಸಿದರು. ಕೆಲವರು ವಿಷ್ಣುವರ್ಧನ್ ಅವರ ಪ್ರಸಿದ್ಧ ಪಾತ್ರಗಳ ರೀತಿಯಲ್ಲೇ ವೇಷಭೂಷಣ ತೊಟ್ಟು, ವಿಷ್ಣು, ವಿಷ್ಣು ಎಂಬ ಜಯಘೋಷ ಕೂಗುತ್ತಾ ಸಂಭ್ರಮವನ್ನು ಮತ್ತಷ್ಟು ಮೆರಗುಗೊಳಿಸಿದರು.
ಆಟೋರಿಕ್ಷಾಗಳನ್ನು ಕನ್ನಡದ ಬಾವುಟಗಳಿಂದ ಅಲಂಕರಿಸಲಾಗಿತ್ತು, ಜೊತೆಗೆ ವಿಷ್ಣುವರ್ಧನ್ ಭಾವಚಿತ್ರವುಳ್ಳ ಸ್ಟಿಕ್ಕರ್‌ಗಳು ಎಲ್ಲೆಡೆ ಗಮನ ಸೆಳೆಯುತ್ತಿದ್ದವು. ವಿಷ್ಣುವರ್ಧನ್ ಅಭಿಮಾನಿಗಳ ಸಂಘಗಳ ಒಕ್ಕೂಟವು ವಿಶೇಷ ಹೋಳಿಗೆ ಊಟವನ್ನು ಅಭಿಮಾನಿಗಳಿಗೆ ವಿತರಿಸಿ ಆತಿಥ್ಯ ನೀಡಿತು. ಇದೇ ವೇಳೆ, ಅನೇಕ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಸಂದೇಶವನ್ನೂ ಸಾರಿದರು. ಸ್ಮಾರಕ ಜಾಗದಲ್ಲಿ ದಿನವಿಡೀ ವಿಷ್ಣುವರ್ಧನ್ ಅಭಿನಯದ ಜನಪ್ರಿಯ ಚಿತ್ರಗೀತೆಗಳು ಮೊಳಗುತ್ತಿದ್ದವು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ