ಗದಗ ತಾಲೂಕಿನ ಹರ್ಲಾಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಹಸೆಮಣೆ ಏರಬೇಕಿದ್ದ 29 ವರ್ಷದ ಅರ್ಜುನ್ ನೆಲ್ಲೂರ ಮತ್ತು 31 ವರ್ಷದ ಈರಣ್ಣ ಉಪ್ಪಾರ ಸೇರಿದಂತೆ 43 ವರ್ಷದ ಅರ್ಜುನ ಚಿಕ್ಕಪ್ಪ ರವಿ ನೆಲ್ಲೂರ ಮೃತ ಪಟ್ಟಿದ್ದಾರೆ.
ಮೃತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ವೇಗದಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮೊದಲು ಡಿವೈಡರ್ಗೆ ಡಿಕ್ಕಿಯಾಗಿದೆ. ಬಳಿಕ ಎದುರಿನಿಂದ ಬಂದ ಬಸ್ಗೆ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣ ಅಂತ್ಯಕ್ಕೊಳಗಾಗಿದ್ದಾರೆ. ಅಪಘಾತದ ಭೀಕರತೆಗೆ ಕಾರಿನ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿವೆ. ಕಾರಿನ ಅವಶೇಷಗಳು ಅಪಘಾತದ ಭೀಕರತೆಯನ್ನು ಎತ್ತಿ ತೋರಿಸುತ್ತಿವೆ.
ಈರಣ್ಣ ಉಪ್ಪಾರ್ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ನಿವಾಸಿ ಹಾಗು ಅರ್ಜುನ್ ನೆಲ್ಲೂರು ಬಂಕಾಪುರ ತಾಲೂಕಿನ ಹುನಗುಂದ ಗ್ರಾಮದ ನಿವಾಸಿಗಳು. ಅರ್ಜುನ್ ನೆಲ್ಲೂರ ಹಾವೇರಿ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈರಣ್ಣ ಉಪ್ಪಾರ ಕೊಪ್ಪಳ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಬ್ಬರು ಕಾನ್ಸ್ಟೇಬಲ್ಗಳು ಹಸೆಮಣೆ ಏರಬೇಕಿತ್ತು. ಮದುವೆಯಾಗಿ ಸುಂದರ ಸಂಸಾರವನ್ನ ನಡೆಸಬೇಕಿತ್ತು. ಆದರೆ ದುರ್ದೈವ ಎನ್ನುವಂತೆ ಈ ಅಪಘಾತ ಎಲ್ಲವನ್ನೂ ಕೊನೆಗೊಳಿಸಿದೆ. ಅವರ ಎಲ್ಲ ಖುಷಿ, ಕನಸುಗಳನ್ನ ನುಚ್ಚುನೂರು ಮಾಡಿದೆ.
ಕಾರು ಅತ್ಯಂತ ವೇಗದಲ್ಲಿ ಬರುತ್ತಿತ್ತು. ಏಕಾಏಕಿ ಡಿವೈಡರ್ಗೆ ಡಿಕ್ಕಿಯಾಗಿ, ಫುಟ್ಬಾಲ್ನಂತೆ ಬಂದು ಬಸ್ಗೆ ಢಿಕ್ಕಿಯಾಯಿತು. ನಾವು ತಕ್ಷಣ ಬಸ್ ನಿಲ್ಲಿಸಿ ಕೆಳಗೆ ಇಳಿದಾಗ ಕಾರಿನಲ್ಲಿದ್ದ ಮೂವರು ಮೃತಪಟ್ಟಿರುವುದು ಕಂಡು ಬಂತು ಅಂತ ಗೋವಾ ಬಸ್ನ ಚಾಲಕ ದಿಲೀಪ್ ಮತ್ತು ನಿರ್ವಾಹಕ ಹೀರೇಶ ಅಪಘಾತದ ಭಯಾನಕ ದೃಶ್ಯವನ್ನ ವಿವರಿಸಿದ್ದಾರೆ. ಈ ಅಪಘಾತದಿಂದ ಪೊಲೀಸ್ ಇಲಾಖೆಗೂ, ಮೃತರ ಕುಟುಂಬಗಳಿಗೂ ಅಪಾರ ನಷ್ಟ ಉಂಟಾಗಿದೆ.
ವರದಿ : ಲಾವಣ್ಯ ಅನಿಗೋಳ




