ಅತಿ ಹೆಚ್ಚು ನಿರೀಕ್ಷೆಯಲ್ಲಿರುವ ‘ಕಾಂತಾರ ಚಾಪ್ಟರ್ 1’ ಸಿನೆಮಾದ ಟ್ರೈಲರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಸೆಪ್ಟೆಂಬರ್ 22, 2025 ರಂದು ಮಧ್ಯಾಹ್ನ 12:45ಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರೇಕ್ಷಕರು ಟ್ರೈಲರ್ ವೀಕ್ಷಿಸಬಹುದಾಗಿದೆ. ಟ್ರೈಲರ್ ಅನ್ನು ಹೊಂಬಾಳೆ ಫಿಲಂಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಾಯಕನಾಗಿ ನಟಿಸಿರುವಂತಹ ಈ PAN INDIA ಪ್ರಾಜೆಕ್ಟ್ ಬಗ್ಗೆ ಭಾರಿ ಕುತೂಹಲವಿದೆ. ಆದರೆ ಚಿತ್ರದ ಪ್ರಚಾರ ಚಟುವಟಿಕೆಗಳು ಇನ್ನು ಹೆಚ್ಚಾಗಿ ವೇಗ ಪಡೆದುಕೊಂಡಿಲ್ಲ ಎಂಬ ಆಕ್ಷೇಪಣೆಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿತ್ತು.
ಯಾಕಂದ್ರೆ ಟ್ರೈಲರ್, ಹಾಡುಗಳು ಅಥವಾ ಯಾವುದೇ ಸುದ್ದಿಗೋಷ್ಠಿ, ಪ್ರೀ-ರಿಲೀಸ್ ಈವೆಂಟ್ ಕೂಡ ನಡೆದಿಲ್ಲ. ಒಟ್ಟಾರೆ ಕಾಂತಾರ ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ, ಕತೆ ಇನ್ನಿತರೆ ವಿಚಾರಗಳನ್ನು ರಿಷಬ್ ಶೆಟ್ಟಿ ಬಹಳ ಗುಟ್ಟಾಗಿ ಇರಿಸಿದ್ದರು.
ಕಳೆದ ಎರಡು ವರ್ಷಗಳ ಕಾಲ ಚಿತ್ರೀಕರಣ ನಡೆದಿದ್ದರೂ ಈಗಾಗಲೇ ಕೇವಲ ಎರಡು ಪೋಸ್ಟರ್‌ಗಳು ಹಾಗೂ ಒಂದು ಮೇಕಿಂಗ್ ವಿಡಿಯೋ ಮಾತ್ರವೇ ಬಿಡುಗಡೆಯಾಗಿದೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ಮೇಕಿಂಗ್ ವಿಡಿಯೋ ವಿಭಿನ್ನ ಸೆಟ್‌ಗಳು, ಕಲಾವಿದರ ನಟನೆ, ತಂತ್ರಜ್ಞರ ಪರಿಶ್ರಮದ ದೃಶ್ಯಾವಳಿಗಳನ್ನು ಒಳಗೊಂಡಿತ್ತು. ಅದರ ಬಳಿಕ ಮೊದಲ ಬಾರಿಗೆ ಇದೀಗ ಟ್ರೈಲರ್ ಬಿಡುಗಡೆವಾಗಲಿದೆ. ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ಇನ್ನಷ್ಟು ನಿರೀಕ್ಷೆ ಮೂಡಿಸಿದೆ.
ಹಿಂದೆ ಕೆಜಿಎಫ್ 2 ಸಿನಿಮಾದ ಟ್ರೈಲರ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅತ್ಯಂತ ವೀಕ್ಷಣೆ ಪಡೆದ ದಾಖಲೆಯನ್ನು ಆಗ ಮಾಡಿತ್ತು. ಈಗ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಈ ಹಿಂದಿನ ಹಲವು ದಾಖಲೆಗಳನ್ನು ಕೆಡವಿ ಹಾಕಿ ಹೊಸ ದಾಖಲೆಯನ್ನು ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವರದಿ : ಲಾವಣ್ಯ ಅನಿಗೋಳ

