ಮೈಸೂರು ವಿಶ್ವವಿಖ್ಯಾತ ದಸರಾ ಹಬ್ಬದ ಸಂಭ್ರಮಕ್ಕೆ ಸಜ್ಜಾಗಿದೆ. ಚಿನ್ನದ ಅಂಬಾರಿ ಹೊತ್ತು ಮೆರೆಯಲು ಗಜಪಡೆಯೂ ಸಿದ್ಧವಾಗಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ಗೆ ಕೌಂಟ್ಡೌನ್ ಆರಂಭವಾಗಿದೆ. ಈ ನಡುವೆಯೇ ಮಕ್ಕಳೂ ನಾಡಹಬ್ಬವನ್ನು ನೇರವಾಗಿ ಅನುಭವಿಸಲಿ ಎಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಿಗೆ ನಾಳೆಯಿಂದ 18 ದಿನಗಳ ಹಬ್ಬದ ರಜೆ ಘೋಷಿಸಿದೆ.
ಶುಕ್ರವಾರ ಹೊರಡಿಸಿದ ಆದೇಶದ ಪ್ರಕಾರ, ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರವರೆಗೆ ಸರ್ಕಾರಿ ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ಅಕ್ಟೋಬರ್ 2ರಂದು ನಡೆಯುವ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಈ ಬಾರಿ ರಾಜ್ಯದ ಶಾಲಾ ಮಕ್ಕಳಿಗೆ ದೀರ್ಘಾವಧಿಯ ಭರ್ಜರಿ ರಜೆ ಸಿಕ್ಕಿದೆ. ಇದರಿಂದ ಹಬ್ಬದ ಸಂಭ್ರಮ ಮಕ್ಕಳಲ್ಲಿ ಇನ್ನಷ್ಟು ಹೆಚ್ಚಾಗಿದೆ. ರಾಜ ಪರಂಪರೆ ಮತ್ತು ಇತಿಹಾಸ ಪ್ರಸಿದ್ಧ ವೈಭವವನ್ನು ಹೊತ್ತ ಮೈಸೂರು ದಸರಾ, ನಾಡಾಧಿದೇವತೆ ತಾಯಿ ಚಾಮುಂಡೇಶ್ವರಿ ಉತ್ಸವವಾಗಿಯೂ ಹೆಸರುವಾಸಿಯಾಗಿದೆ. ಸೆಪ್ಟೆಂಬರ್ 22ರಂದು ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಈ ವರ್ಷದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

