ತಂದೆ ಮೇಲಿನ ಸೇಡಿಗೆ ರ್ಯಾಂಕ್ ಸ್ಟುಡೆಂಟ್ ಮಗಳನ್ನೇ ಕಿಡ್ನಾಪ್ ಮಾಡಿ ಕೊಂದ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿಯ ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಸೆಪ್ಟೆಂಬರ್ 11 ರಂದು 21ವರ್ಷದ ಭಾಗ್ಯಶ್ರೀ ಎಂಬ ಯುವತಿಯ ಕಾಣೆಯಾಗಿದ್ದಳು. ಈಗ 7 ದಿನಗಳ ನಂತರ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಳಖೇಡ ಗ್ರಾಮದ ಸುಲಹಳ್ಳಿ ನಿವಾಸಿಯಾಗಿದ್ದ ಭಾಗ್ಯಶ್ರೀ ಹತ್ಯೆಗೀಡಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಪ್ರಕಾರ ಮಂಜುನಾಥ್ ತನ್ನ ಸಹೋದರ ವಿನೋದ್ ಆತ್ಮಹತ್ಯೆಗೆ ಕಾರಣರಾಗಿದ್ದ ಎಂಬ ಸೇಡಿನ ನಿಟ್ಟಿನಲ್ಲಿ ಈ ಕೃತ್ಯವೆಸಗಿರಬಹುದು ಎಂಬ ಪ್ರಾಥಮಿಕ ಮಾಹಿತಿಯಿದೆ.
ವಿನೋದ್ ಮಳಖೇಡದ ಅಲ್ಟ್ರಾಟೇಕ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಖಾಯಂ ಉದ್ಯೋಗದ ನಿರೀಕ್ಷೆಯಲ್ಲಿದ್ದ. ಆದರೆ, ಖಾಯಂ ಉದ್ಯೋಗ ಸಿಗದ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಉದ್ಯೋಗ ಸಿಗದಿರಲು ಭಾಗ್ಯಶ್ರೀಯ ತಂದೆ ಚೆನ್ನವೀರಪ್ಪ ಜವಾಬ್ದಾರರು ಎಂಬ ಆರೋಪವಿದೆ.
ಈ ಘಟನೆಗೆ ಪ್ರತಿಕ್ರಿಯೆಯಾಗಿ ಮಂಜುನಾಥ್ ತನ್ನ ಸಹೋದರನ ಮರಣಕ್ಕೆ ಕಾರಣರಾದ ಚೆನ್ನವೀರಪ್ಪನ ಮೇಲಿನ ಸೇಡಿಗೆ ಆತನ ಮಗಳನ್ನ ಗುರಿಯಾಗಿಸಿಕೊಂಡಿದ್ದಾನೆ ಎಂಬ ಶಂಕೆ ಉಂಟಾಗಿದೆ. ಸೆಪ್ಟೆಂಬರ್ 11ರಂದು ವಾಕಿಂಗ್‌ಗೆ ತೆರಳಿದ್ದ ಭಾಗ್ಯಶ್ರೀಯನ್ನು ಮಂಜುನಾಥ್ ಕಿಡ್ನಾಪ್ ಮಾಡಿದ್ದಾನೆ. ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಯ ಹಿನ್ನೆಲೆ ಕಾರಣ ಮತ್ತು ಇತರ ವಿಷಯಗಳ ಬಗ್ಗೆ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮಂಜುನಾಥನ ವಿಚಾರಣೆ ಜೋರಾಗಿದ್ದು ಪ್ರಕರಣ ಇನ್ನೂ ಬೆಳಕಿಗೆ ಬರುವ ನಿರೀಕ್ಷೆಯಿದೆ.
ವರದಿ : ಲಾವಣ್ಯ ಅನಿಗೋಳ