ಬೆಂಗಳೂರು ರಸ್ತೆ ಗುಣಮಟ್ಟ ಮತ್ತು ಉದ್ಯಮಿಗಳು ನಗರ ಬಿಟ್ಟು ಹೋಗುವ ವಿಚಾರದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಮಾತಿನ ಚಕಮಕಿ ತೀವ್ರವಾಗಿದೆ. ಈಗ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡಾ ಚರ್ಚೆಗೆ ಎಂಟ್ರಿ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡ ನಿಖಿಲ್, ನಿಮ್ಮಲ್ಲೇ ಮೂಲಭೂತ ಸಮಸ್ಯೆ ಇದೆ. ಬರೀ ಧಿಮಾಕು, ಎಲ್ಲವನ್ನೂ ಬಲ್ಲೆ ಎನ್ನುವ ಹವಣಿಕೆ! ಅದಕ್ಕೆ ಬೆಂಗಳೂರಿನ ಮೂಲಸೌಕರ್ಯ ಕುಸಿತಕ್ಕೆ ನೀವು ಕಾರಣ ಎಂದು ತಿರುಗೇಟು ನೀಡಿದ್ದಾರೆ.
ಈ ಮೊದಲು ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ, ಬೆಂಗಳೂರು ಮತ್ತು ಕರ್ನಾಟಕ ಭ್ರಷ್ಟರ ಕೈಯಲ್ಲಿ ಸಿಲುಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೆ ಸಾವಿನ ಗುಂಡಿ. ಇದನ್ನೇ ಗ್ರೇಟರ್ ಬೆಂಗಳೂರು ಎನ್ನುತ್ತೀರಾ? ಈ ನಗರಕ್ಕೆ ಮಹಾನ್ ಪರಂಪರೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಡಿಕೆ ಶಿವಕುಮಾರ್, ಸಂಸದರಾಗಿ, ಕೇಂದ್ರ ಸಚಿವರಾಗಿ ಬೆಂಗಳೂರಿಗೆ ನಿನ್ನ ಕೊಡುಗೆ ಏನು? ಯುಪಿಎ ಸರ್ಕಾರದ ಕಾಲದಲ್ಲಿ ಜೆಎನ್-ನರ್ಮ್ ಯೋಜನೆಯ ಮೂಲಕ ಅನೇಕ ಅನುದಾನ ಬಂದಿತ್ತು. ಇಂದು ಪ್ರಧಾನಮಂತ್ರಿಗಳಿಗೆ ಬಲಗೈ ಆಗಿರುವ ನೀವೇ ಬೆಂಗಳೂರಿಗೆ ವಿಶೇಷ ಅನುದಾನ ಕೊಡಿಸಿ. 10 ಸಾವಿರ ಕೋಟಿ ರೂ. ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ಕೊಡಿಸಲಿ. ಅದೇಕೆ ಕೊಡಿಸುತ್ತಿಲ್ಲ? ಎಂದು ಪ್ರಶ್ನೆ ಎಸೆದಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, ಬಹುಶಃ ನಿಮಗೆ ನೆಟ್ವರ್ಕ್ ಸಮಸ್ಯೆ ಕಾಡುತ್ತಿರಬಹುದು. ನಿಮ್ಮ ಮೆದುಳು–ನಾಲಿಗೆಯ ನಡುವೆ ಲೈನ್ಅಪ್ ಸರಿಯಾಗಿಲ್ಲ. ಇನ್ನೊಬ್ಬರ ಮಾತಿನ ಅರ್ಥೈಸುವ ಸಾಮರ್ಥ್ಯವೇ ಇಲ್ಲ. ಅಸಂಬದ್ಧವಾಗಿ ಪ್ರತಿಕ್ರಿಯೆ ನೀಡುತ್ತೀರಿ, ನಗೆಯಪಾಟಲಿಗೆ ಗುರಿಯಾಗುತ್ತೀರಿ. ಉದ್ಯಮಿಗಳ ಕಳವಳಕ್ಕೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ನೈತಿಕ ಧೈರ್ಯ ತುಂಬಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ