Tuesday, September 23, 2025

Latest Posts

ಅಮ್ಮನಂತೆ ಸಾಕಿದ್ಳು.. ಮಗ ಕಾಮುಕನಾಗಿ ಅಮ್ಮನ್ನ ಕೊಂದೇಬಿಟ್ಟ

- Advertisement -

ಕೆಟ್ಟ ಮಕ್ಕಳಿದ್ದರು, ಕೆಟ್ಟ ತಾಯಿ ಇರುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಸೆಪ್ಟೆಂಬರ್ 15ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜಾವಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಳೆತೋಟದಲ್ಲಿ ಪತ್ತೆಯಾದ ಮಹಿಳೆಯ ಕೊಲೆ ಪ್ರಕರಣಕ್ಕೆ ಅಚ್ಚರಿ ಮೂಡಿಸುವಂತಹ ತಿರುವು ಸಿಕ್ಕಿದೆ. ತಾಯಿಯ ಮಮತೆ, ಅಕ್ಕರೆಯ ಆರೈಕೆಯನ್ನು ನೀಡುತ್ತಿದ್ದ ಮಹಿಳೆಯನ್ನೇ 17 ವರ್ಷದ ಅಪ್ರಾಪ್ತ ಬಾಲಕನೇ ಅತ್ಯಾಚಾರ ಎಸಗಿ ಕೊಲೆಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಅನಾಥನಾಗಿ ಬೆಳೆದ ಆ ಬಾಲಕನಿಗೆ, ತಾಯಿಯ ಕೊರತೆ ಬಾರದಂತೆ ಮಾಡುತ್ತಿದ್ದ ಈ ಮಹಿಳೆ, ತನ್ನ ಮಗನಂತೆ ಸಾಕಿ, ಶಾಲೆಗೆ ಕಳುಹಿಸಿ, ಕೈತುತ್ತು ನೀಡಿ ಅಮ್ಮನ ಪ್ರೀತಿಯನ್ನೇ ತೋರಿಸುತ್ತಿದ್ದರು. ಆದರೆ, ಆಕೆಯನ್ನೇ ಅವನು ಮಗನಂತೆ ಕಾಣದೇ, ಕಾಮುಕನಾಗಿ ವರ್ತಿಸಿ, ಪೈಶಾಚಿಕ ಕೃತ್ಯ ಎಸಗಿದ್ದಾನೆ. ಸೆಪ್ಟೆಂಬರ್ 15ರಂದು 45 ವರ್ಷದ ಮಹಿಳೆ ಕೂಲಿ ಕೆಲಸಕ್ಕೆ ಹೋದರೂ ಮನೆಗೆ ಮರಳದೇ ಹೋದರು. ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು. ಮರುದಿನ ಪಕ್ಕದೂರಿನ ಬಾಳೆತೋಟದಲ್ಲಿ ಮಹಿಳೆಯ ಶವ ಪತ್ತೆಯಾಯಿತು. ಮೈಮೇಲೆ ಗಾಯದ ಗುರುತು ಕಂಡುಬಂದಿದ್ದರಿಂದ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಇದೇ ವೇಳೆ ಮಹಿಳೆ ಹಾಗೂ ಆಕೆ ಸಾಕುತ್ತಿದ್ದ ಅಪ್ರಾಪ್ತ ಬಾಲಕನ ನಡುವೆ ಜಗಳವಾಗಿದ್ದ ಮಾಹಿತಿ ದೊರಕಿದ್ದು, ಅದನ್ನೇ ಆಧರಿಸಿ ತನಿಖೆ ನಡೆಸಿದಾಗ ಆಘಾತಕಾರಿ ಸತ್ಯ ಹೊರಬಂದಿದೆ.

17 ವರ್ಷಗಳ ಹಿಂದೆ ಅನಾಥನಾಗಿ ಬಂದಿದ್ದ ಬಾಲಕನನ್ನು ತಾಯಿಯಂತೆ ಸಾಕಿ ಬೆಳೆಸಿದ ಮಹಿಳೆ, ಆತನನ್ನು ಜೀವನದಲ್ಲಿ ಸ್ಥಿರವಾಗಿ ನಿಲ್ಲಿಸಲು ಕನಸು ಕಂಡಿದ್ದಳು. ಆದರೆ, ಆಕೆಯ ವಿಶ್ವಾಸವನ್ನೇ ಅವನು ದ್ರೋಹಿಸಿ, ಏಕಾಂಗಿಯಾಗಿ ಸಿಕ್ಕಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಬರ್ಬರವಾಗಿ ಕೊಲೆಮಾಡಿದ್ದಾನೆ. ಈ ಕೃತ್ಯದಲ್ಲಿ ಅಪ್ರಾಪ್ತನೊಬ್ಬನೇ ಇರದೇ, ಯಾರಾದರೂ ಸಹಾಯ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು, ಸಂಪೂರ್ಣ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಗಂಡನಿಲ್ಲದಿದ್ದರೂ ಗಂಡಸಿನಂತೆ ಬದುಕಿ, ಮಗನಿಗೆ ಮನೆ ಕಟ್ಟಬೇಕು ಎಂಬ ಕನಸು ಬೆಳೆಸಿಕೊಂಡಿದ್ದ ಆಕೆಯ ಬದುಕು, ಇದೇ ಮಗನಂತೆ ಸಾಕಿದವನಿಂದಲೇ ಹೀಗೆ ಕೊಚ್ಚಿಹೋಗಿರುವುದು ಊರನ್ನೆ ಬೆಚ್ಚಿಬೀಳುವಂತೆ ಮಾಡಿದೆ. ಆರೋಪಿಗೆ ಗಟ್ಟಿ ಶಿಕ್ಷೆ ವಿಧಿಸಬೇಕೆಂಬ ಬೇಡಿಕೆ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss