ದಕ್ಷಿಣ ಭಾರತದ ಜನಪ್ರಿಯ ರಾಜಕೀಯ ನಾಯಕ ಹಾಗೂ ಆಂಧ್ರ ಉಪಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್, ರಾಜಕೀಯ ಜವಾಬ್ದಾರಿಗಳ ಜೊತೆಗೆ ಸಿನೆಮಾ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ಹರಿ ಹರ ವೀರ ಮಲ್ಲು ಸಿನಿಮಾ ಬಿಡುಗಡೆಯಾದರೂ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಸಾಧಿಸಲಿಲ್ಲ. ಇದೀಗ ಅವರು ನಟಿಸಿರುವ ಮತ್ತೊಂದು ಸಿನಿಮಾ ಓಜಿ ಸೆಪ್ಟೆಂಬರ್ 25ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ನಿರ್ದೇಶಿಸಿರುವುದು ಸುಜೀತ್, ನಿರ್ಮಾಪಕರು ಡಿವಿವಿ ದಯಾನಂದ. ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಕಾಣಿಸಿಕೊಂಡರೆ, ಬಾಲಿವುಡ್ ನಟ ಇಮ್ರಾನ್ ಹಾಶ್ಮಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಓಜಿ ಚಿತ್ರ ಚಿತ್ರೀಕರಣವನ್ನು ಪವನ್ ಕಲ್ಯಾಣ್ ಕಳೆದ ಆಂಧ್ರ ವಿಧಾನಸಭೆ ಚುನಾವಣೆಗೆ ಮುನ್ನವೇ ಆರಂಭಿಸಿದ್ದರು. ಆದರೆ ಚುನಾವಣಾ ಗಿಜಿಗುಡಿಯಲ್ಲಿ ಚಿತ್ರೀಕರಣ ನಿಲ್ಲಬೇಕಾಯಿತು. ಇತ್ತೀಚೆಗೆ ಪುನರಾರಂಭಗೊಂಡ ಶೂಟಿಂಗ್‌ನಲ್ಲಿ ಭಾಗವಹಿಸಿ ಪವನ್ ಕಲ್ಯಾಣ್ ಚಿತ್ರವನ್ನು ಪೂರ್ಣಗೊಳಿಸಿದರು. ತೆಲುಗು ರಾಜ್ಯಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಹೆಚ್ಚುವರಿ ಶೋಗಳು ಮತ್ತು ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರದಿಂದಲೇ ಅನುಮತಿ ಪಡೆಯಬೇಕಾದ ನಿಯಮವಿದೆ. ಹರಿ ಹರ ವೀರ ಮಲ್ಲು ಸಿನಿಮಾಕ್ಕೂ ಈ ರೀತಿಯ ಅನುಮತಿ ದೊರೆತಿತ್ತು. ಈಗ ಓಜಿ ಸಿನಿಮಾಗೂ ಆಂಧ್ರ ಪ್ರದೇಶ ಸರ್ಕಾರ ಹೆಚ್ಚುವರಿ ಶೋ ಹಾಗೂ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಆದರೆ ನೆರೆಯ ತೆಲಂಗಾಣ ಸರ್ಕಾರ ಹೆಚ್ಚುವರಿ ಶೋಗಳಿಗೆ ಅನುಮತಿ ನಿರಾಕರಿಸಿದೆ. ಅಲ್ಲದೇ, ಪುಷ್ಪ 2 ಬಿಡುಗಡೆಯ ಸಂದರ್ಭದಲ್ಲಿ ನಡೆದ ಅವಘಡದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 1 ಗಂಟೆಯ ಶೋಗಳಿಗೂ ನಿಷೇಧ ಹೇರಿದೆ. ಆದರೆ ಸೆಪ್ಟೆಂಬರ್ 24ರ ರಾತ್ರಿ 9 ಗಂಟೆಯಿಂದ ಪ್ರದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದೆ. ಹೀಗಾಗಿ ಆಂಧ್ರ ಪ್ರದೇಶದಲ್ಲಿ ಓಜಿ ಮಧ್ಯರಾತ್ರಿ ಶೋಗಳಿಂದಲೇ ಪ್ರಾರಂಭವಾಗಲಿದ್ದು, ತೆಲಂಗಾಣದಲ್ಲಿ ಮಾತ್ರ ನಿರ್ಬಂಧ ಹೇರಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ