ಮುಂಬೈನ ಕಾಂಡಿವಲಿ ಉಪನಗರದ ದೇವಾಲಯದಲ್ಲಿ 52 ವರ್ಷದ ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆತಂಕ ಮೂಡಿಸಿದೆ. 19 ವರ್ಷದ ಯುವತಿಯೊಬ್ಬಳು ಅರ್ಚಕರ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಕೆಲವೇ ಗಂಟೆಗಳಲ್ಲೇ ಈ ಘಟನೆ ನಡೆದಿದೆ. ದೇವಾಲಯದೊಳಗೆ ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆ ಯುವತಿ ಹಾಗೂ ಆಕೆಯ ತಂದೆ ರಾತ್ರಿ 2 ಗಂಟೆ ಸುಮಾರಿಗೆ ಕಾಂಡಿವಲಿ ಪೊಲೀಸ್ ಠಾಣೆಗೆ ತೆರಳಿ, ಶುಕ್ರವಾರ ರಾತ್ರಿ ಅರ್ಚಕರು ಕರೆ ಮಾಡಿ ಅಸಭ್ಯ ಆಹ್ವಾನ ನೀಡಿದರು ಎಂದು ದೂರಿದ್ದರು. ಆದರೆ, ದೂರು ದಾಖಲಿಸಲು ಬೆಳಿಗ್ಗೆ ಬರಲು ಪೊಲೀಸರು ಸೂಚಿಸಿದ್ದರು. ಅದಾದ ಬಳಿಕ ಅರ್ಚಕರನ್ನು ಹುಡುಕಲು ಆರಂಭಿಸಿದರೂ, ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಮರುದಿನ ಬೆಳಗ್ಗೆ ದೇವಾಲಯದಲ್ಲೇ ಅರ್ಚಕರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸತ್ತಿರುವುದು ಪತ್ತೆಯಾಯಿತು. ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ