Tuesday, September 23, 2025

Latest Posts

ದಸರಾಗೆ KSRTC ಕೊಡುಗೆ: 2,300 ಹೆಚ್ಚುವರಿ ಬಸ್ + ಪ್ರವಾಸಿ ಪ್ಯಾಕೇಜ್

- Advertisement -

ದಸರಾ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವಿಶೇಷ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 26ರಿಂದ ಆರಂಭವಾಗಿ 2,300 ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಆಯುಧ ಪೂಜೆಯ ಸಂದರ್ಭದಲ್ಲಿ ರಜೆಯಿರುವುದರಿಂದ ಸೆ.26, 27 ಮತ್ತು 30ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳ ಕಡೆಗೆ ಈ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಈ ಬಸ್‌ಗಳು ಮುಖ್ಯವಾಗಿ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ಹೊರಡಲಿವೆ. ಅಕ್ಟೋಬರ್ 2 ಮತ್ತು 5ರಂದು ಈ ಹೆಚ್ಚುವರಿ ಬಸ್‌ಗಳು ವಿವಿಧ ನಗರಗಳಿಂದ ಮತ್ತೆ ಬೆಂಗಳೂರಿಗೆ ಮರಳಲಿವೆ.

ಮೈಸೂರು ದಸರಾ ವೀಕ್ಷಣೆಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ 610 ವಿಶೇಷ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಕಾರ್ಯಾಚರಣೆಗಿಳಿಸುತ್ತಿದೆ. ಅದರಲ್ಲಿ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ನೇರವಾಗಿ ಮೈಸೂರಿಗೆ 260 ಹೆಚ್ಚುವರಿ ಬಸ್‌ಗಳು ಲಭ್ಯವಾಗಲಿವೆ. ಇದಲ್ಲದೆ, ಮೈಸೂರು ಸುತ್ತಮುತ್ತಲ ಪ್ರವಾಸಿ ಕೇಂದ್ರಗಳಾದ ಚಾಮುಂಡಿಬೆಟ್ಟ, ಕೆಆರ್ಎಸ್ ಅಣೆಕಟ್ಟು, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ. ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ ಹಾಗೂ ಗುಂಡ್ಲುಪೇಟೆ ಮುಂತಾದ ಸ್ಥಳಗಳಿಗೆ 350 ಹೆಚ್ಚುವರಿ ಬಸ್‌ಗಳನ್ನು ಸಂಚರಿಸಲಾಗುತ್ತಿದೆ.

ಇದೇ ವೇಳೆ, ಮೈಸೂರು ಪ್ರವಾಸಿಗರಿಗಾಗಿ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 7ರವರೆಗೆ ಮೂರು ವಿಭಿನ್ನ ಪ್ರವಾಸಿ ಪ್ಯಾಕೇಜ್‌ಗಳನ್ನು ನಿಗಮ ಪರಿಚಯಿಸಿದೆ. ಗಿರಿದರ್ಶಿನಿ ಪ್ಯಾಕೇಜ್ನಲ್ಲಿ ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿಬೆಟ್ಟ ಸೇರಿವೆ. ಜಲದರ್ಶಿನಿ’ ಪ್ಯಾಕೇಜ್ಡಿ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆಆರ್ಎಸ್ ಒಳಗೊಂಡಿದೆ. ‘ದೇವದರ್ಶಿನಿ’ ಪ್ಯಾಕೇಜ್ನಲ್ಲಿ ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ ಮತ್ತು ಶ್ರೀರಂಗಪಟ್ಟಣ ಸೇರಿವೆ. ಈ ಪ್ಯಾಕೇಜ್ ಬಸ್‌ಗಳು ಮೈಸೂರಿನಿಂದ ಹೊರಡಲಿವೆ. ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಟಿಕೆಟ್‌ಗಳಿಗೆ www.ksrtc.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss