ನವರಾತ್ರಿ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಡಬಲ್ ಬೋನಸ್ ಘೋಷಿಸಿದ್ದಾರೆ. ಸೆಪ್ಟೆಂಬರ್ 22ರಿಂದ ನವರಾತ್ರಿ ಆರಂಭವಾಗುತ್ತಿರುವ ಬೆನ್ನಲ್ಲೇ ದೇಶದ ಜನತೆಗೆ ಸಂದೇಶ ನೀಡಿದ ಅವರು, ನಾಳೆಯಿಂದಲೇ ಪರಿಷ್ಕೃತ ಜಿಎಸ್ಟಿ ನೀತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಮನೆ ಕಟ್ಟುವುದು, ಬೈಕ್, ಸ್ಕೂಟರ್, ಕಾರು ಖರೀದಿ, ದಿನನಿತ್ಯ ಬಳಕೆಯ ವಸ್ತುಗಳು, ಔಷಧಿ ಇನ್ನು ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ ಎಂದು ಮೋದಿ ಘೋಷಿಸಿದರು.
ಹೊಸ ಜಿಎಸ್ಟಿ ನೀತಿಯಲ್ಲಿ ಹಲವು ವಸ್ತುಗಳಿಗೆ ಶೂನ್ಯ ತೆರಿಗೆ ಹಾಗೂ ದಿನ ಬಳಕೆ ವಸ್ತುಗಳಿಗೆ ಕೇವಲ 5% ತೆರಿಗೆ ನಿಗದಿಪಡಿಸಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ. ಮನೆ ನಿರ್ಮಾಣ ಸಾಮಗ್ರಿಗಳು, ಟಿವಿ, ಫ್ರಿಜ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳು, ಸ್ಕೂಟರ್, ಬೈಕ್, ಕಾರು ಖರೀದಿ ವೆಚ್ಚ ಕಡಿಮೆಯಾಗಲಿದೆ. ಪ್ರವಾಸ ಹಾಗೂ ಹೋಟೆಲ್ ವಾಸ್ತವ್ಯಗಳ ಮೇಲೂ ತೆರಿಗೆ ಇಳಿಕೆ ಮಾಡಲಾಗಿದೆ. ಇದರಿಂದ ಗ್ರಾಹಕರು, ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೂ ಸಮಾನ ಲಾಭ ತಂದುಕೊಡಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಆಹಾರ ವಸ್ತುಗಳು, ಔಷಧಿ, ಬ್ರಶ್, ಪೇಸ್ಟ್, ಆರೋಗ್ಯಸೇವೆಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲೆ ತೆರಿಗೆ ಸಂಪೂರ್ಣ ಶೂನ್ಯ ಅಥವಾ ಗಣನೀಯ ಇಳಿಕೆ ಮಾಡಲಾಗಿದೆ. ಮಧ್ಯಮ ವರ್ಗಕ್ಕೆ ಇದು ನವರಾತ್ರಿ ವಿಶೇಷ ಉಡುಗೊರೆಯಾಗಲಿದೆ ಎಂದು ಮೋದಿ ಸಂತೋಷ ವ್ಯಕ್ತಪಡಿಸಿದ್ದಾರೆ. ನಾಗರೀಕ ದೇವೋಭವ ಮಂತ್ರದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದೂ ಹೇಳಿದ್ದಾರೆ.
ಇದಲ್ಲದೆ, “ಸ್ವದೇಶಿ ಮಂತ್ರ”ದ ಮಹತ್ವವನ್ನು ಉಲ್ಲೇಖಿಸಿದ ಮೋದಿ, ಆತ್ಮನಿರ್ಭರ ಭಾರತ ಸಾಧನೆಗೆ ಪ್ರತಿಯೊಬ್ಬರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು. “ಪ್ರತಿ ಮನೆ ಸ್ವದೇಶಿ ವಸ್ತುಗಳಿಂದ ತುಂಬಿರಬೇಕು. ನಾನು ಸ್ವದೇಶಿ ಎಂದು ಗರ್ವದಿಂದ ಹೇಳಬೇಕು,” ಎಂದು ಕರೆ ನೀಡಿದರು. ಇದರಿಂದ ಸಣ್ಣ ವ್ಯಾಪಾರ, ದೇಶೀಯ ಕಂಪನಿಗಳಿಗೆ ಮಾರುಕಟ್ಟೆ ಸಿಗುತ್ತದೆ, ಪ್ರತಿ ರಾಜ್ಯ ಹಾಗೂ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ