Tuesday, September 23, 2025

Latest Posts

ಹೂ ಮುಡಿದು-ಆರತಿ ಪಡೆದು ವಿರೋಧಿಗಳ ಬಾಯಿಮುಚ್ಚಿಸಿದ ಬಾನು ಮುಷ್ತಾಕ್

- Advertisement -

ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್‌, ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದರು. ಅದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಜತೆ ಚಾಮುಂಡೇಶ್ವರಿ ದರ್ಶನ ಪಡೆದ ಅವರು ಆರತಿ ತೆಗೆದುಕೊಂಡರು. ಹೂವು ಮುಡಿದು ಹಿಂದೂ ಸಂಪ್ರದಾಯದಂತೆಯೇ ನಡೆದುಕೊಳ್ಳುವ ಮೂಲಕ ಟೀಕಾಕಾರರ ಬಾಯಿಮುಚ್ಚಿಸಿದರು ಮತ್ತು ವೇದಿಕೆಯ ಭಾಷಣದಲ್ಲಿ ವಿರೋಧಿಗಳಿಗೆ ಕೌಂಟರ್ ಕೊಟ್ಟರು.

ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬಾನು ಮುಷ್ತಾಕ್, ಚಾಮುಂಡಿ ಸನ್ನಿಧಿ ಬಳಿ ಕರೆದೊಯ್ಯುವುದಾಗಿ ನನ್ನ ಸ್ನೇಹಿತೆ ಹೇಳಿದ್ದಳು. ಈಗ ಸರ್ಕಾರದ ಮೂಲಕ ಚಾಮುಂಡಿ ನನ್ನನ್ನು ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವನದ ಅತ್ಯಂತ ಗೌರವದ ಘಳಿಗೆ ಎಂದರು. ಮೈಸೂರು ದಸರಾ ಶಾಂತಿಯ ಹಬ್ಬ. ಇದು ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಸುಗಂಧವು ಐಕ್ಯತೆ ಆಗಲಿ. ದಸರಾ ಕೇವಲ ಮೈಸೂರು, ನಮ್ಮ ನಾಡು, ದೇಶಕ್ಕೆ ಮಾತ್ರ ಸೀಮಿತವಾಗದೆ ಇಡೀ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದು ಬಾನು ಮುಷ್ತಾಕ್ ಹಾರೈಸಿದರು.

ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ, ಭೂಮಿ ಯಾರನ್ನೂ ಹೊರ ತಳ್ಳಲ್ಲ. ಸಂಸ್ಕೃತಿ ನಮ್ಮ ಬೇರು, ಸೌಹಾರ್ದ ನಮ್ಮ ಶಕ್ತಿ. ಎಷ್ಟೇ ಸವಾಲು ಬಂದರೂ ನನ್ನ ಆಹ್ವಾನಿಸಿದ್ದಕ್ಕೆ ಧನ್ಯವಾದ. ನನಗೆ ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯಗೆ ಧನ್ಯವಾದಗಳು ಎಂದರು. ಇನ್ನು ಪೂಜೆ ಪುನರಾಸ್ಕರಗಳು ನನಗೆ ಹೊಸದಲ್ಲ, ನಾನು ನೂರಾರು ದೀಪಗಳನ್ನು ಬೆಳಗಿದ್ದೇನೆ. ನನಗೆ ಮಂಗಳಾರತಿ ಹೊಸದಲ್ಲ. ಚಾಮುಂಡಿ ತಾಯಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಡಿದ್ದಾಳೆ. ಮನುಷ್ಯರು ಮಾತ್ರ ಗಡಿಗಳನ್ನು ಕಟ್ಟಿಕೊಂಡಿದ್ದೇವೆ. ನಾವು ಪರಸ್ಪರ ಸಂಸ್ಕೃತಿಯನನು ಗೌರವಿಸೋಣ ಎಂದು ಬಾನು ಮುಷ್ತಾಕ್ ವಿರೋಧಿಗಳಿಗೆ ವೇದಿಕೆ ಮೇಲೆ ಕೌಂಡರ್ ಕೊಟ್ಟರು.

ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕಿಯನ್ನಾಗಿ ಆಯ್ಕೆ ಮಾಡಿದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿಶೇಷವಾಗಿ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಬಾನು ಮುಷ್ತಾಕ್ ಸನಾತನ ಹಿಂದೂ ಧರ್ಮದ ಸಂಪ್ರದಾಯವನ್ನು ಒಪ್ಪುತ್ತಾರೆಯೇ? ಮೂರ್ತಿ ಪೂಜೆ ಒಪ್ಪುತ್ತಾರೆಯೇ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರವೆಂಬಂತೆ, ಚಾಮುಂಡೇಶ್ವರಿ ಮಹಾಮಂಗಳಾರತಿಯಲ್ಲಿ ಭಾಗಿಯಾದ ಬಾನು ಮುಷ್ತಾಕ್ ಹೂವು ಮುಡಿದರು. ಆರತಿ ತೆಗೆದುಕೊಂಡರು. ಹಿಂದೂ ಸಂಪ್ರದಾಯದ ಪ್ರಕಾರ ನಡೆದುಕೊಂಡ ಅವರು ಆ ನಂತರ ಪುಷ್ಪಾರ್ಚನೆ ಮಾಡಿ ದಸರಾಗೆ ಚಾಲನೆ ನೀಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss