ರಾಣೆಬೆನ್ನೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣದ ಉದ್ದೇಶದಿಂದ 46 ಎಕರೆ ಜಮೀನು ಖರೀದಿಸಿದ್ದರೂ, ರಾಜ್ಯ ಸರ್ಕಾರದಿಂದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಯಾವುದೇ ಸ್ಪಂದನೆ ಇಲ್ಲ ಎಂದು ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀಗಳು ರಾಣೆಬೆನ್ನೂರಿನಲ್ಲಿ ಕಾಲೇಜು ಕಟ್ಟುವ ದಿಟ್ಟ ಯೋಜನೆಗೆ ಮುಂದಾಗಿದ್ದಾರೆ. ಜಮೀನನ್ನು ಖರೀದಿಸಿದಾಗ 12 ಲಕ್ಷ ರೂ. ಬೆಲೆಯಿತ್ತು. ಈಗ ಆ ಜಮೀನಿಗೆ ಎಕರೆಗೆ 80 ಲಕ್ಷ ರೂ. ಮೌಲ್ಯ ಇದೆ. ಆದರೆ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇನ್ನೂ ಬಲಗಡೆ ಹೂ ಕೊಟ್ಟಿಲ್ಲ ಎಂದು ತಮ್ಮದೇ ಸಮುದಾಯದ ನಾಯಕನಾದ ಸಿದ್ದರಾಮಯ್ಯರ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ನಗರದ ಕಾಳಿದಾಸ ಸಂಸ್ಥೆಯಲ್ಲಿ ಭಾನುವಾರ ನಡೆದ ಕುರುಬ ಸಮಾಜದ ಸಭೆಯಲ್ಲಿ ಮಾತನಾಡಿದರು. ನಾನು ಸಿದ್ದರಾಮಯ್ಯ ಅವರನ್ನು ಪದೇ ಪದೇ ಭೇಟಿಯಾಗಿ, ಮೆಡಿಕಲ್ ಕಾಲೇಜು ಕಟ್ಟಬೇಕೆಂದು ಮನವಿ ಮಾಡಿದ್ದೇನೆ. ಆದರೆ ಪ್ರತಿಸಾರಿ ನಿರಾಸೆಯೇ ಸಿಕ್ಕಿದೆ. ಅವರು ನಾನಾ ಕಾರಣಗಳನ್ನು ಹೇಳುತ್ತಾ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಸಾವಿರಾರು ಕುರಿಗಳನ್ನ ಸಾಕಿದರೂ ಅದರಲ್ಲಿ 20 ರಿಂದ 25 ಮೇಕೆ ಸಾಕುತ್ತೇವೆ. ಮೇಕೆ ಅಡ್ಡಾಡಿ ಮೇಯುತ್ತದೆ. ಕುರಿ ನೆಲಕಚ್ಚಿ ಮೇಯುತ್ತದೆ. ಮೇಕೆ ನೋಡಿ ಕುರಿಗಳು ಅದರ ಹಿಂದೆ ಹೋಗುತ್ತವೆ. ನಮ್ಮಲ್ಲಿ ಮೇಕೆ ಬೇಡ, ಕುರುಬ ಸಮಾಜದಲ್ಲಿ ಮೇಕೆಗಳು ಬೇಡ. ಅಕಸ್ಮಾತ್ ಮೇಕೆ ಇದ್ದರೂ ಮಾಜಿ ಶಾಸಕ ಬಸವರಾಜ್ ಹಿಟ್ನಾಳ್ ಅವರಿಗೆ ಹೇಳಿ ಎಂದು ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ವರದಿ : ಲಾವಣ್ಯ ಅನಿಗೋಳ