ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಲಿಂಗಾಯತ ಧರ್ಮ, ಜಾತಿಗಣತಿ, ಮತ್ತು ಮೀಸಲಾತಿ ಕುರಿತಾಗಿ ನೀಡಿರುವ ವಾಗ್ದಾಳಿ ಹೊಸ ರಾಜಕೀಯ ಚರ್ಚೆಗೊಂದು ದಾರಿ ತೆರೆದಿದೆ. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರಲ್ಲ ಎಂಬ ಅವರ ಹೇಳಿಕೆ, ರಾಜ್ಯದ ಧಾರ್ಮಿಕ ಮತ್ತು ರಾಜಕೀಯ ವಲಯದಲ್ಲಿ ಭಾರಿ ವಿವಾದವನ್ನು ಉಂಟುಮಾಡಿದೆ.
ಬಸವಣ್ಣ ಮಹಾನ್ ಕ್ರಾಂತಿಕಾರಿ. ಅವರು ಹಿಂದೂ ಧರ್ಮದ ಮೌಢ್ಯಗಳ ವಿರುದ್ಧ ಹೋರಾಡಿದವರು. ಆದರೆ ಅವರು ಲಿಂಗಾಯತ ಎಂಬ ಪ್ರತ್ಯೇಕ ಧರ್ಮ ಸ್ಥಾಪಿಸಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಕಂಪನಿಗಳ ಮತ್ತು ಸಂಘಟನೆಗಳ ರಚನೆಯಾಗಿರುವ ‘ಲಿಂಗಾಯತ ಧರ್ಮ’ ಎಂಬ ಪರಿಕಲ್ಪನೆಯು ಕೇವಲ ರಾಜಕೀಯ ಪ್ರೇರಿತ ವಾದವಾಗಿದೆ, ಎಂದು ಟೀಕಿಸಿದರು.
400 ಕೋಟಿ ಖರ್ಚು ಮಾಡಿ ಜಾತಿಗಣತಿ ನಡೆಸುತ್ತಿರುವುದು, ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರಿ. ಇದು ಕಾಂಗ್ರೆಸ್ ಮತ್ತು ಕೆಲವು ಅಲ್ಪಸಂಖ್ಯಾತ ಸಮುದಾಯಗಳ ಸಂಚು. ಜಾತಿ ಕಾಲಂನಲ್ಲಿ ಲಿಂಗಾಯತ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಇತ್ಯಾದಿ ನಮೂದಿಸಲು ಬಲ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಭಕ್ತರು ಮನ್ನಣೆ ನೀಡಬಾರದು ಎಂದರು.
ದಿನದಿಂದ ದಿನಕ್ಕೆ ಲಿಂಗಾಯತ ಸಮುದಾಯದ ಒಳಜಾತಿಗಳಲ್ಲಿ ಉಂಟಾಗುತ್ತಿರುವ ಮತಿ ಭ್ರಮೆ ಬಗ್ಗೆ ಯತ್ನಾಳ್ ಆತಂಕ ವ್ಯಕ್ತಪಡಿಸಿದ್ದಾರೆ. ವೀರಶೈವ ಲಿಂಗಾಯತ ಎಂದು ಬರೆಸಲು ಕೆಲ ಮಠಾಧೀಶರು ಒತ್ತಾಯ ಮಾಡುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಇದನ್ನು ಪ್ರತ್ಯೇಕ ಧರ್ಮವೆಂದು ಅಂಗೀಕರಿಸಿಲ್ಲ. ಮೀಸಲಾತಿಯ ಹಕ್ಕು ಉಳಿಸಿಕೊಳ್ಳಲು ಧರ್ಮದ ಕಾಲಂನಲ್ಲಿ ‘ಹಿಂದೂ’, ಜಾತಿಯಲ್ಲಿ ‘ಪಂಚಮಸಾಲಿ’ ಅಥವಾ ಇತರ ಉಪಜಾತಿಯನ್ನು ಬರೆವುದು ಸೂಕ್ತ ಎಂದು ಹೇಳಿದರು.
ಅವರ ಭವಿಷ್ಯದ ರಾಜಕೀಯ ಹಾದಿ ಕುರಿತು ಪ್ರಶ್ನೆಗೆ ಉತ್ತರ ನೀಡಿದ ಯತ್ನಾಳ್, ನಾನು ಗುಡ್ ನ್ಯೂಸ್‌ಗಾಗಿ ಬಿಜೆಪಿ ಮನೆ ಬಾಗಿಲಿಗೆ ಹೋಗುವುದಿಲ್ಲ. ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡೋಣ ಎಂದು ಗೂಢಾರ್ಥಭರಿತವಾಗಿ ಉತ್ತರಿಸಿದರು.
ವರದಿ : ಲಾವಣ್ಯ ಅನಿಗೋಳ

