ಕೂಡಲಸಂಗಮದ ಪಂಚಮಸಾಲಿ ಮಹಾಪೀಠದಲ್ಲಿ ದೊಡ್ಡ ಬದಲಾವಣೆ ನಡೆದಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಉಚ್ಚಾಟನೆಯ ನಂತರ ಪೀಠಕ್ಕೆ ಬೀಗ ಬಿದ್ದಿದ್ದು, ಅಲ್ಲಿ ಗಾಢ ಮೌನ ಆವರಿಸಿದೆ.
ಭಾನುವಾರ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ಸಭೆ ನಡೀತು. ಈ ಸಭೆಯಲ್ಲಿ ಸ್ವಾಮೀಜಿಯನ್ನು ಅಧಿಕಾರದಿಂದ ದೂರ ಮಾಡುವ ನಿರ್ಧಾರ ಪ್ರಕಟಿಸಿತು. ಸ್ವಾಭಿಮಾನವಿದ್ದರೆ ಇನ್ಮುಂದೆ ಪೀಠದತ್ತ ಹೆಜ್ಜೆ ಹಾಕಬಾರದೆಂದು ಟ್ರಸ್ಟ್ ಅಧ್ಯಕ್ಷ ಕಾಶಪ್ಪನವರ್ ಸ್ಪಷ್ಟ ಎಚ್ಚರಿಕೆ ನೀಡಿದರು.
ಉಚ್ಚಾಟನೆಯ ನಂತರ ಕೂಡಲಸಂಗಮ ತಲುಪಿದ ಜಯಮೃತ್ಯುಂಜಯ ಸ್ವಾಮೀಜಿಗೆ ಸಭೆ ನಡೆಸಲು ಎಲ್ಲೆಡೆ ನಿರಾಕರಣೆ ಎದುರಾಯಿತು. ಕಾಶಪ್ಪನವರ ಪರೋಕ್ಷ ಸೂಚನೆಯ ಪರಿಣಾಮವಾಗಿ ಸಭಾಂಗಣಗಳ ಬಾಗಿಲು ಮುಚ್ಚಲ್ಪಟ್ಟಿದೆ ಇದರಿಂದ ಕೊನೆಗೆ ಸ್ವಾಮೀಜಿ ಆಲದಮರದ ಕೆಳಗೆ ಭಕ್ತರೊಂದಿಗೆ ಸಭೆ ನಡೆಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನನ್ನು ಉಚ್ಚಾಟಿಸುವ ಅಧಿಕಾರ ಯಾರಿಗೂ ಇಲ್ಲ. ಅದು ಸೃಷ್ಟಿಕರ್ತನಿಗೇ ಸೇರಿದೆ. ಪರಮಾತ್ಮನ ಸ್ವರೂಪರಾದ ಭಕ್ತರ ತೀರ್ಮಾನವೇ ನನಗೆ ಅಂತಿಮ. ನಾನು ಭಕ್ತರ ಹೃದಯದಲ್ಲೇ ಪೀಠ ಕಟ್ಟಿದ್ದೇನೆ. ಈ ಪೀಠಕ್ಕೆ ಟ್ರಸ್ಟ್ ಅಥವಾ ಕಟ್ಟಡದೊಂದಿಗೆ ಸಂಬಂಧವಿಲ್ಲ ಎಂದು ಭಾವುಕರಾಗಿ ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಕೂಡಲಸಂಗಮದ ಪೀಠಕ್ಕೆ ರಾತ್ರೋರಾತ್ರಿ ಬೀಗ ಹಾಕಲಾಗಿತ್ತು. ವಿಜಯಾನಂದ ಕಾಶಪ್ಪನವರ ಸೂಚನೆ ಮೇರೆಗೆ ಈ ಕ್ರಮ ಜರುಗಿದೆಯೆಂಬ ಆರೋಪ ಕೇಳಿಬಂದಿತ್ತು. ನಂತರ ಸ್ವಾಮೀಜಿಯ ಬೆಂಬಲಿಗರು ಬೀಗ ಒಡೆದಿದ್ದು, ಐವರ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕಾಲದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಾದ ವಿಜಯಾನಂದ ಕಾಶಪ್ಪನವರ್, ಹೆಬ್ಬಾಳ್ಕರ್ ಮತ್ತು ಯತ್ನಾಳ್ ಮುಂಚೂಣಿಯಲ್ಲಿ ಹೋರಾಟ ನಡೆಸಿದ್ದರು.
ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆ ಪಕ್ಷದ ನಾಯಕರು ಹೋರಾಟದಿಂದ ಹಿಂದೆ ಸರಿದರು. ಇದೇ ವೇಳೆ ಬಿಜೆಪಿ ನಾಯಕ ಯತ್ನಾಳ್ ಮತ್ತು ಜಯಮೃತ್ಯುಂಜಯ ಶ್ರೀಗಳು ಒಗ್ಗಟ್ಟಿನ ಸಂದೇಶ ನೀಡಿದ ಪರಿಣಾಮ, ಕಾಶಪ್ಪನವರ ಹಾಗೂ ಸ್ವಾಮೀಜಿಯ ನಡುವೆ ಬಿರುಕು ಮೂಡಿತು. ಅದೇ ಸಂದರ್ಭ ಪೀಠಕ್ಕೆ ಬೀಗ ಹಾಕುವ ಮಟ್ಟಕ್ಕೆ ಘಟನೆ ತಲುಪಿತ್ತು. ಜುಲೈಯಲ್ಲೇ ಕಾಶಪ್ಪನವರ್, ಅವಕಾಶ ಬಂದರೆ ಸ್ವಾಮೀಜಿಯನ್ನು ಪೀಠದಿಂದ ಇಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಈಗ ಆ ಮಾತು ನಿಜವಾಗಿದೆ. ಸದ್ಯ, ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಂದಿನ ಹೆಜ್ಜೆ ಏನಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ