ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ದುರ್ಘಟನೆ ಮನಕಲಕುವಂತಾಗಿದೆ. ಅಲ್ಲಿ ನರ್ಸಿಂಗ್ ಓದುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಸುಮಿತ್ರಾ ಗೋಕಾಕ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೆಪ್ಟೆಂಬರ್ 22ರಂದು ಬೆಳಿಗ್ಗೆ ಟಿಫನ್ ತೆಗೆದುಕೊಂಡು ಹಾಸ್ಟೆಲ್ ರೂಮ್ಗೆ ಹೋದ ಅವಳು ಹೊರಗೆ ಬಂದಿರಲಿಲ್ಲ. ಸಹಪಾಠಿಗಳು ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಸಿಗದ ಕಾರಣ ಬಾಗಿಲು ಮುರಿದು ನೋಡಿದಾಗ ಸುಮಿತ್ರಾ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಘಟನೆ ನಡೆದ ನಂತರ ತಂದೆ ದುಂಡಪ್ಪ ಮತ್ತು ಕುಟುಂಬಸ್ಥರು ಮಗಳ ಶವದ ಮುಂದೆ ನೋವು ತಡೆದುಕೊಳ್ಳಲಾರದ ಸ್ಥಿತಿಯಲ್ಲಿ ಕಣ್ಣೀರಿಟ್ಟರು. 25 ಸಾವಿರ ರೂ. ಸಾಲ ಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿದ್ದೆ. ನನಗೆ ಮಗಳೇನು ತಪ್ಪು ಮಾಡಿಕೊಂಡಳು ಹೇಳಿ ಎಂದು ತಂದೆ ವಾರ್ಡನ್ ಕಾಲಿಗೆ ಬಿದ್ದು ಗೋಳಾಡಿದರು. ಈ ದೃಶ್ಯ ಹೃದಯಮಿಡಿಯುವಂತಿತ್ತು.
ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದಾಗ ಸುಮಿತ್ರಾ ಬರೆದ ಡೆತ್ ನೊಟ್ ಪತ್ತೆಯಾಗಿದೆ. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದು ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಬಿಮ್ಸ್ ಶವಾಗಾರಕ್ಕೆ ಕಳುಹಿಸಲಾಗಿದ್ದು, ಈ ಪ್ರಕರಣವನ್ನು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ