GST ಇಳಿಕೆಗೆ 75,000 ಮಾರುತಿ ಸುಜುಕಿ ಕಾರುಗಳ ಬುಕಿಂಗ್‌!

ನವರಾತ್ರಿಯ ಮೊದಲ ದಿನದಿಂದಲೇ ಕೇಂದ್ರ ಸರ್ಕಾರ ಜಾರಿ ಮಾಡಿದ ಜಿಎಸ್‌ಟಿ ದರ ಇಳಿಕೆಯ ಪರಿಣಾಮವಾಗಿ ದೇಶದಾದ್ಯಂತ ಖರೀದಿ ಜ್ವರ ಏರಿಕೆಯಾಗಿದೆ. ಕಾರು, ಫ್ರಿಜ್, ಟಿವಿ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ವಿಶೇಷವಾಗಿ, ಕಾರು ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದು, ಹಬ್ಬದ ಖರೀದಿ ಭಾವನೆಗೆ ಹೊಸ GST 2.0 ಸುಧಾರಣೆಗಳು ಹೆಚ್ಚುವರಿ ಉತ್ತೇಜನ ನೀಡಿವೆ.

ಮಾರುತಿ ಸುಜುಕಿ ಸಂಸ್ಥೆಯ ಪ್ರಕಾರ, ಕಾರುಗಳ ಬುಕ್ಕಿಂಗ್ ಸಾಮಾನ್ಯಕ್ಕಿಂತ 50% ಹೆಚ್ಚಾಗಿದೆ. “35 ವರ್ಷಗಳಲ್ಲಿ ಇಂತಹ ಪ್ರತಿಕ್ರಿಯೆ ಕಂಡಿಲ್ಲ. ನವರಾತ್ರಿಯ ಮೊದಲ ದಿನವೇ 80,000ಕ್ಕೂ ಹೆಚ್ಚು ವಿಚಾರಣೆಗಳನ್ನು ದಾಖಲಿಸಿದ್ದೇವೆ. ಈಗಾಗಲೇ 25,000 ಕಾರುಗಳನ್ನು ತಲುಪಿಸಿದ್ದೇವೆ ಮತ್ತು ಶೀಘ್ರದಲ್ಲೇ ವಿತರಣೆಗಳು 30,000 ತಲುಪುವ ನಿರೀಕ್ಷೆಯಿದೆ. ಸೆಪ್ಟೆಂಬರ್ 18 ರಂದು ಹೆಚ್ಚುವರಿ ಬೆಲೆ ಕಡಿತ ಘೋಷಿಸಿದ ಬಳಿಕದಿಂದ, ಒಟ್ಟು 75,000 ಬುಕ್ಕಿಂಗ್‌ಗಳನ್ನು ಸ್ವೀಕರಿಸಿದ್ದೇವೆ. ಪ್ರತಿ ದಿನ ಸುಮಾರು 15,000 ಬುಕ್ಕಿಂಗ್‌ಗಳು ಬರುತ್ತಿವೆ, ಎಂದು ಮಾರುತಿ ಸುಜುಕಿಯ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ತಿಳಿಸಿದ್ದಾರೆ.

ಇದೇ ವೇಳೆ ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ, ಅಜಿಯೋ ಮತ್ತು ಮಿಶೋ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಸೇಲ್ ಆರಂಭವಾಗಿದೆ. ಜಿಎಸ್‌ಟಿ ಇಳಿಕೆಯಿಂದ ಲಾಭ ಪಡೆದು, ಆನ್‌ಲೈನ್ ಖರೀದಿಯಲ್ಲೂ ಎಲೆಕ್ಟ್ರಾನಿಕ್ ವಸ್ತುಗಳು, ಕಾರುಗಳು ಸೇರಿದಂತೆ ಅನೇಕ ಉತ್ಪನ್ನಗಳಿಗೆ ಭರ್ಜರಿ ಬೇಡಿಕೆ ಹೆಚ್ಚಾಗಿದೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author