ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಸಮರ ಸಾರಿದ್ದಾರೆ. ರಾಜ್ಯ ಸರ್ಕಾರ ಕಾಟಾಚಾರಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದು, ಕಳಪೆ ಮಟ್ಟದ ಡಾಂಬರೀಕರಣ ಮಾಡಲಾಗ್ತಿದೆ ಎಂದು ಆರೋಪಿಸಿದೆ. ಹೀಗಾಗಿ ಬೆಂಗಳೂರಿನ ರಸ್ತೆಗಳನ್ನು ತಡೆದು, ಗುಂಡಿ ಮುಚ್ಚುವ ಅಭಿಯಾನವನ್ನು ಬಿಜೆಪಿಗರು ಕೈಗೊಂಡಿದ್ದಾರೆ. ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆಗೆ ಇಳಿದಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಬಿಜೆಪಿ ನಾಯಕರು ರೋಡಿಗಿಳಿದಿದ್ದಾರೆ. ಯಲಹಂಕ ಹಳೆ ನಗರದ ಕೆಂಪೇಗೌಡ ವಾರ್ಡ್ ನಂಬರ್ 1ರಲ್ಲಿ, ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ, ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ರಸ್ತೆ ಗುಂಡಿ ಮುಚ್ಚುವ ಅಭಿಯಾನದಲ್ಲಿ ಸ್ಥಳೀಯ ಬಿಜೆಪಿ ನಾಯಕರು, ಕಾರ್ಯಕರ್ತರು ಸಾಥ್ ಕೊಟ್ಟಿದ್ರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡಿದ್ದಾರೆ.
ಬೆಂಗಳೂರಿನಲ್ಲಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. 1 ಗಂಟೆಗಳ ಕಾಲ ರಸ್ತೆ ತಡೆದು ಹೋರಾಟಕ್ಕೆ ಮುಂದಾಗಿದ್ದಾರೆ. ಧರ್ಮಸ್ಥಳ ಪ್ರಕರಣ, ದಸರಾ ಉದ್ಘಾಟಕರ ವಿಚಾರದಲ್ಲೂ, ಸರ್ಕಾರದ ವಿರುದ್ಧ ಬಿಜೆಪಿಗರು ಹೋರಾಟ ಮಾಡಿದ್ರು. ಇದೀಗ ರಸ್ತೆ ಗುಂಡಿಗಳ ವಿಚಾರವನ್ನೇ ಅಸ್ತ್ರ ಮಾಡಿಕೊಂಡಿದ್ದು, ಪ್ರತಿಭಟನೆ ಕೈಗೊಂಡಿದ್ದಾರೆ.