ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಯೂಟ್ಯೂಬರ್ ಮುಕಳೆಪ್ಪ ಲವ್ ಕಂ ಮ್ಯಾರೇಜ್ ಕಹಾನಿ ಭಾರೀ ಸಂಚಲನ ಸೃಷ್ಟಿಸಿದೆ. ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮುಸ್ಲಿಂ. ಗಾಯತ್ರಿ ಹಿಂದು. ಹೀಗಾಗಿ ಲವ್ ಜಿಹಾದ್ ಆರೋಪ ಮಾಡಲಾಗಿದ್ದು, ಹಿಂದೂ ಸಂಘಟನೆಗಳು ಕೂಡ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದವು.
ಇದೀಗ ಕಿಡ್ನ್ಯಾಪ್ ಕೇಸ್ ದಾಖಲಾದ ಬೆನ್ನಲ್ಲೇ, ಮೊದಲ ಬಾರಿಗೆ ಪತ್ನಿ ಗಾಯತ್ರಿ ಜೊತೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ನಾನು ಯಾವುದೇ ರೀತಿಯ ಲವ್ ಜಿಹಾದ್ ಮಾಡಿಲ್ಲ. ಗಾಯತ್ರಿ ಯಾವ ಧರ್ಮದಲ್ಲಿ ಹುಟ್ಟಿದ್ದಾರೋ ಅದೇ ಧರ್ಮದಲ್ಲಿ ಮುಂದುವರೆಯುತ್ತಾರೆ. ನಾನೂ ಕೂಡ ಯಾವ ಧರ್ಮದಲ್ಲಿ ಹುಟ್ಟಿದ್ದೇನೋ ಅದೇ ಧರ್ಮದಲ್ಲಿ ಮುಂದುವರೆಯುತ್ತೇನೆಂದು ಸ್ಪಷ್ಟನೆ ಕೊಟ್ಟಿದ್ದಾರೆ. ಪತ್ನಿ ಗಾಯತ್ರಿ ಕೂಡ ಮಾತನಾಡಿದ್ದು, ನಮ್ಮನ್ನು ಬದುಕಲು ಬಿಡಿ ಎಂದು ಕೈಮುಗಿದು ಬೇಡಿಕೊಂಡಿದ್ದಾಳೆ.
ಇನ್ನು, ಜೂನ್ 5ರಂದು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಸಬ್‌ರಿಜಿಸ್ಟರ್ ಕಚೇರಿಯಲ್ಲಿ, ಮುಕಳೆಪ್ಪ, ಗಾಯತ್ರಿ ರಿಜಿಸ್ಟರ್ ಮದುವೆಯಾಗಿದ್ರು. ಬಳಿಕ ಹಿಂದೂ ಪರ ಸಂಘಟನೆಗಳ ಜೊತೆ ಆಗಮಿಸಿ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಗಾಯತ್ರಿ ಪೋಷಕರು ದೂರು ನೀಡಿದ್ರು.
ಮುಕಳೆಪ್ಪ ಮೋಸ ಮಾಡಿ ಮಗಳನ್ನು ಮದುವೆಯಾಗಿದ್ದಾನೆ. ತಮ್ಮ ಮಗಳನ್ನು ವಾಪಸ್ ಕಳಿಸುವಂತೆ ಕೇಳಿದ್ರೆ ಧಮ್ಕಿ ಹಾಕ್ತಿದ್ದಾನೆಂದು ಆರೋಪಿಸಿದ್ರು. ಆದ್ರೆ ಗಾಯತ್ರಿ, ನನ್ನ ಗಂಡ ಯಾರಿಗೂ ಜೀವ ಬೆದರಿಕೆ ಹಾಕಿಲ್ಲ. ಸುಳ್ಳು ಪ್ರಕರಣ ದಾಖಲಾಗಿದೆ ಅಂತಾ, ಜಡ್ಜ್ ಎದುರು ಹೇಳಿಕೆ ದಾಖಲಿಸಿದ್ರು.
ಮತ್ತೊಂದೆಡೆ, ಇದೇ ವಿಚಾರವಾಗಿ ಧಾರವಾಡ ಗ್ರಾಮೀಣ ಠಾಣೆಯಲ್ಲಿ, ಬಜರಂಗದಳ ಕಾರ್ಯಕರ್ತರು ದೂರು ದಾಖಲಿಸಿದ್ರು. ಮುಸ್ಲಿಂ ಧರ್ಮಕ್ಕೆ ಸೇರಿದ ಮುಕಳೆಪ್ಪ, ನಕಲಿ ಐಡಿ ಸೃಷ್ಟಿಸಿ, ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆಂದು ಆರೋಪಿಸಿದ್ರು. ಹಣ ಪಡೆದು ನಿಯಮ ಬಾಹಿರವಾಗಿ ವಿವಾಹ ನೋಂದಣಿ ಮಾಡಿದ್ದಾರೆಂದು ಆರೋಪಿಸಿ, ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಹಿಂದೂ ಪರ ಸಂಘಟನೆ ಮುತ್ತಿಗೆ ಹಾಕಿದ್ರು.
ಒಟ್ನಲ್ಲಿ ಮುಕಳೆಪ್ಪ, ಗಾಯತ್ರಿ ಅಂತರ್ ಧರ್ಮೀಯ ವಿವಾಹ, ಭಾರೀ ವಿವಾದಕ್ಕೆ ಕಾರಣವಾಗಿದೆ.