ಬೆಂಗಳೂರಿನಲ್ಲಿ ಅರ್ಚಕನ ಮುಖವಾಡದ ಹಿಂದೆ ಕಳ್ಳತನ ನಡೆಸುತ್ತಿದ್ದ ಪ್ರವೀಣ್ ಮತ್ತು ಅವನ ಸಂಗಾತಿ ಸಂತೋಷ್ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಗಲು ದೇವಾಲಯಗಳಲ್ಲಿ ಪೂಜೆ, ಹೋಮ-ಹವನ ಮಾಡುವ ಈ ಅರ್ಚಕ, ರಾತ್ರಿ ಬಂದ ಕೂಡಲೇ ಅದೇ ದೇವಾಲಯದ ಬೆಳ್ಳಿ, ಹಿತ್ತಾಳೆ ಹಾಗೂ ಚಿನ್ನಾಭರಣಗಳನ್ನು ಕದ್ದುಕೊಂಡು ಮಾರಾಟ ಮಾಡುತ್ತಿದ್ದ. ಪ್ರತೀ ಬಾರಿ ಕಳ್ಳತನ ಮಾಡಿದ ನಂತರ ದೇವರ ಮುಂದೆ ಕೈ ಮುಗಿದು ಕ್ಷಮೆ ಬೇಡುವ ಪ್ರವೀಣನ ಆಟ ಕೊನೆಗೂ ಬಯಲಾಗಿದೆ.
ಶಿವಮೊಗ್ಗ, ಉಡುಪಿಯ ಪ್ರತಿಷ್ಠಿತ ದೇವಾಲಯಗಳಲ್ಲಿ ಅರ್ಚಕನಾಗಿದ್ದ ಪ್ರವೀಣ್, ಜೈಲಿನಲ್ಲಿ ಪರಿಚಯವಾದ ಸಂತೋಷ್ ಜೊತೆಗೂಡಿ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಿಗೂ ಕನ್ನ ಹಾಕಿದ್ದ. ಬನಶಂಕರಿ ದೇವಾಲಯದಲ್ಲಿ ಅರ್ಚಕನಾಗಿದ್ದಾಗಲೂ ದೇವಾಲಯದ ಸಾಮಗ್ರಿಗಳನ್ನು ಕದ್ದಿದ್ದಾನೆಂದು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಬಳಿಕ ಇಬ್ಬರೂ ಗೊಟ್ಟಿಗೇರೆಯ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಬಂಧನಕ್ಕೊಳಗಾದರು. ತನಿಖೆಯಲ್ಲಿ ಬೆಂಗಳೂರಿನ ಹಲವಾರು ದೇವಾಲಯಗಳಲ್ಲಿ ಇವರ ಕಳ್ಳತನ ಬೆಳಕಿಗೆ ಬಂದಿದೆ.
ಪೊಲೀಸರು ತಿಳಿಸಿದಂತೆ, ಈ ಜೋಡಿ ಚಿನ್ನಾಭರಣ ಮತ್ತು ಸಾಮಾಗ್ರಿಗಳನ್ನು ಬೇರೆ ಬೇರೆ ಅಂಗಡಿಗಳಿಗೆ ಮಾರಾಟ ಮಾಡಿ, ಮತ್ತೆ ಆ ಅಂಗಡಿಗೆ ಕಾಲಿಟ್ಟದ್ದೇ ಇಲ್ಲ. ಪಕ್ಕಾ ಪ್ಲಾನ್ ಮಾಡಿ ಕಳ್ಳತನ ನಡೆಸುತ್ತಿದ್ದ ಇವರಿಂದ ಈಗಾಗಲೇ ₹14 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬನಶಂಕರಿ, ಜಯನಗರ, ಕುಮಾರಸ್ವಾಮಿ ಲೇಔಟ್ ಹಾಗೂ ಜೆಪಿ ನಗರ ಸೇರಿ 11 ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ