ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ, 39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಇರುವಾಗಲೇ ಎಐಸಿಸಿ ನಿಗಮ, ಮಂಡಳಿ ನೂತನ ಅಧ್ಯಕ್ಷರ ಪಟ್ಟಿಯನ್ನು ರವಾನಿಸಿದೆ.

ಈ ಪಟ್ಟಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕೂಡ ಸ್ಥಾನ ಪಡೆದಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶ್ ಗೌಡ ಕೊಲೆ ಆರೋಪದ ಮೇಲೆ, ಶಾಸಕ ವಿನಯ್ ಕುಲಕರ್ಣಿ ಜೈಲಿನಲ್ಲಿದ್ದಾರೆ. ಹೀಗಾಗಿ ವಿನಯ್ ಕುಲಕರ್ಣಿ ನಿರ್ವಹಿಸುತ್ತಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನವನ್ನು, ಅವರ ಪತ್ನಿಗೆ ನೀಡಲಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದ, ಶಾಸಕ ರಾಜು ಕಾಗೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ಕೊಟ್ಟಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ಕೊಕ್ ಕೊಡಲಾಗಿದೆ. ಈ ಸ್ಥಾನಕ್ಕೆ ಅಫ್ಜಲಪುರ ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ ಅರುಣ್ ಪಾಟೀಲ್‌ಗೆ ಅವಕಾಶ ನೀಡಲಾಗಿದೆ.

ಹಣ ನೀಡಿದವರಿಗೆಷ್ಟೇ ವಸತಿ ಇಲಾಖೆಯಲ್ಲಿ ಮನೆ ನೀಡಲಾಗ್ತಿದೆ ಅಂತಾ ಆರೋಪಿಸಿದ್ದ, ಹಿರಿಯ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ಆಗಿತ್ತು. ಇದು ನಿಜ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಅಂತಾ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ರು. ಇದೀಗ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಕ್ಕಾಗಿ, ನಿಗಮ ಮಂಡಳಿಯಿಂದ ಕೈಬಿಡಲಾಗಿದೆ ಎನ್ನಲಾಗಿದೆ.
ಜೊತೆಗೆ ಮೂವರು ಮಾಜಿ ಶಾಸಕರು, ಓರ್ವ ಮಾಜಿ ವಿಧಾನಪರಿಷತ್ ಸದಸ್ಯರು, 2023ರಲ್ಲಿ ವಿಧಾನಸಭಾ ಚುನಾವಣಾ ಟಿಕೆಟ್ ವಂಚಿತರಿಗೆ ಕಾಂಗ್ರೆಸ್ ಹೈಕಮಾಂಡ್ ಸ್ಥಾನಮಾನ ನೀಡಿದೆ.

