ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸಿಸಿ ಕ್ಯಾಮೆರಾಗಳನ್ನೂ ಕಿತ್ತೆಸೆದು, ಸಿಕ್ಕಸಿಕ್ಕ ವಸ್ತುಗಳನ್ನೆಲ್ಲಾ ದೋಚಿ ಎಸ್ಕೇಪ್ ಆಗ್ತಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ, ಕಳ್ಳತನಕ್ಕೆ ಬಂದ ಖದೀಮರ ಗ್ಯಾಂಗ್ ಬರೀ ಗೈಯಲ್ಲಿ ವಾಪಸ್ ಆಗಿದೆ.
ಸೆಪ್ಟೆಂಬರ್ 24ರ ತಡರಾತ್ರಿ ಚಿನ್ನದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ನಾರಾಯಣ ಪೋತದಾರಗೆ ಸೇರಿದ್ದ ಚಿನ್ನಾಭರಣ ಅಂಗಡಿಗೆ, ಮಧ್ಯರಾತ್ರಿ 2 ಗಂಟೆ ಸುಮಾರಿಗೆ, ಮೂವರು ಮುಸುಕುಧಾರಿಗಳು ದ್ವಿಚಕ್ರ ವಾಹನದಲ್ಲಿ ಎಂಟ್ರಿ ಕೊಟ್ಟಿದ್ರು.
ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ದರೋಡೆಕೋರರು, ಮೊದಲು ಅಂಗಡಿಯ ಮುಂಭಾಗದಲ್ಲಿದ್ದ ಸಿಸಿ ಕ್ಯಾಮೆರಾವನ್ನು ಕಿತ್ತು ಹಾಕಿದ್ದಾರೆ. ಬಳಿಕ ಬಾಗಿಲಿನ ಬೀಗ ಒಡೆದು ಅಂಗಡಿಯೊಳಗೆ ನುಗ್ಗಿದ್ದಾರೆ. ದರೋಡೆಕೋರರಲ್ಲಿ ಒಬ್ಬ ಅಂಗಡಿಯಲ್ಲಿ ಕೆಲಕಾಲ ಹುಡುಕಾಟ ನಡೆಸಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅಂಗಡಿಯಿಂದ ಶಬ್ದ ಬರುತ್ತಿರುವುದನ್ನು ಆಲಿಸಿ, ಪಕ್ಕದ ಮನೆಯ ಮಹಿಳೆ ಜೋರಾಗಿ ಕಿರುಚಿದ್ದಾಳೆ. ತಕ್ಷಣವೇ ಅಕ್ಕಪಕ್ಕದ ಮನೆಯವರೆಲ್ಲಾ ಎದ್ದು ಹೊರ ಬಂದಿದ್ದಾರೆ. ಇದ್ರಿಂದ ಗಾಬರಿಗೊಂಡ ದರೋಡೆಕೋರರು, ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದಲ್ಲೂ, ಮಧ್ಯರಾತ್ರಿ 12.30ರಲ್ಲಿ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮಗ ಸಾದೇವ ಬೇರೆ ಊರಿಗೆ ಹೋಗಿದ್ರಿಂದ ತಾಯಿ ಕಸ್ತೂರಬಾಯಿ, ಪಕ್ಕದ ಮನೆಯಲ್ಲಿ ಮಲಗಿದ್ರು.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಖದೀಮರ ಗ್ಯಾಂಗ್, ಮನೆಗೆ ನುಗ್ಗಿ ಚಿನ್ನಾಭರಣ ಮತ್ತು 20 ತೊಲೆ ಬೆಳ್ಳಿ ಕಳವು ಮಾಡಿದ್ದಾರೆ. ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ಹೊರಗೆ ಬಂದಿದ್ರು. ಗಾಬರಿಗೊಂಡ ಕಳ್ಳ ಕದ್ದ ವಸ್ತುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.