- Advertisement -
ಧರ್ಮಸ್ಥಳ ಶವ ಹೂತ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಹೇಳಿಕೊಂಡಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಹಾಗೂ ಇತರರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅರ್ಜಿ ವೈಯಕ್ತಿಕ ಹಿತಾಸಕ್ತಿ ಹಾಗೂ ಹಣ ವಸೂಲಿಗಾಗಿ ಸಲ್ಲಿಸಿದ ಅರ್ಜಿ ಎಂದು ತೀರ್ಮಾನಿಸಿ ವಜಾಗೊಳಿಸಿತು.
ಮೇ 5 ರಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ವಿಚಾರಣೆ ನಡೆಸಿ, ಇದು ಪೈಸಾ ಇಂಟರೆಸ್ಟ್ ಲಿಟಿಗೇಷನ್, ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್ ಮತ್ತು ಪೊಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್ ಮಾತ್ರ, ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೇ ಅಲ್ಲ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಇಷ್ಟು ವರ್ಷ ತಡವಾಗಿ ಪಿಐಎಲ್ ಸಲ್ಲಿಸಿರುವುದಕ್ಕಾಗಿ ಕೋರ್ಟ್ ಗಂಭೀರ ಟೀಕೆಯೂ ಮಾಡಿತು.
ಆದರೂ, ಈ ನಿರ್ಣಾಯಕ ತೀರ್ಪನ್ನು ಅರ್ಜಿದಾರರು ಮತ್ತು ಬುರುಡೆ ಗ್ಯಾಂಗ್ ಎಲ್ಲೂ ಬಹಿರಂಗಪಡಿಸದೆ ಮುಚ್ಚಿಟ್ಟರು. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡಿರುವ ಸತ್ಯವನ್ನು ಬಿಟ್ಟು, ಅದೇ ಪ್ರಕರಣದ ಮರು ತನಿಖೆಗಾಗಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾಹಿತಿ ಇಲ್ಲದ ಸರ್ಕಾರವು, ಅವರ ಒತ್ತಾಯಕ್ಕೆ ಮಣಿದು ಎಸ್‌ಐಟಿ ರಚನೆಗೆ ಮುಂದಾಯಿತು.
ಇದೇ ವೇಳೆ, ಅರ್ಜಿದಾರ ಚಿನ್ನಯ್ಯ ಬೆಳ್ತಂಗಡಿ ಕೋರ್ಟ್‌ನಲ್ಲೂ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಬಾಯ್ಬಿಡದೆ, ಅಸಲಿ ಮಾಹಿತಿ ಮುಚ್ಚಿಟ್ಟೇ ದೂರು ದಾಖಲಿಸಿದ್ದಾರೆ. ಈ ಮೂಲಕ ಬೆಳ್ತಂಗಡಿ ಕೋರ್ಟ್‌ನನ್ನೂ ತಪ್ಪು ದಾರಿಯಲ್ಲಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಅರ್ಜಿದಾರರು ಅಸಲಿ ಮಾಹಿತಿಯನ್ನು ಮುಚ್ಚಿಟ್ಟು ಮತ್ತೆ ದೂರು ನೀಡಲು ಏಕೆ ಮುಂದಾದರು? ಎಂಬ ಪ್ರಶ್ನೆ ಇದೀಗ ತನಿಖಾ ಸಂಸ್ಥೆಗಳನ್ನೂ, ಸಾರ್ವಜನಿಕರನ್ನೂ ಕಾಡುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ
- Advertisement -