ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡಿ ಭಾರತದ ಆಕ್ರೋಶಕ್ಕೆ ಕಾರಣರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಅತಿಥ್ಯ ನೀಡುತ್ತಿದ್ದಾರೆ. ಅಪರೇಷನ್ ಸಿಂಧೂರ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ನೀಡಿದ್ದ ಎರ್ಡೊಗನ್ ಅವರ ಈ ಭೇಟಿ ವಿಶೇಷ ಗಮನ ಸೆಳೆದಿದೆ. ಇದೇ ವೇಳೆ, ಅಮೆರಿಕ ಸರ್ಕಾರವು ಟರ್ಕಿಗೆ F-35 ಯುದ್ಧವಿಮಾನಗಳ ಮಾರಾಟದ ಮೇಲೆ ಹೇರಿದ್ದ ನಿಷೇಧವನ್ನು ರದ್ದು ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ, ರಷ್ಯಾದಿಂದ S-400 ಕ್ಷಿಪಣಿ ವ್ಯವಸ್ಥೆ ಖರೀದಿಸಿದ್ದಕ್ಕಾಗಿ ಟರ್ಕಿಯನ್ನು F-35 ಯೋಜನೆಗಳಿಂದ ಹೊರಹಾಕಲಾಗಿತ್ತು. ಅಮೆರಿಕ ಅಧಿಕಾರಿಗಳು, ಟರ್ಕಿ ರಷ್ಯಾದ ಶಸ್ತ್ರಾಸ್ತ್ರ ವ್ಯವಸ್ಥೆ ಬಳಸುವುದರಿಂದ F-35 ಸಾಮರ್ಥ್ಯಗಳ ಬಗ್ಗೆ ಮಾಹಿತಿ ಸೋರಿಕೆಯ ಅಪಾಯವಿದೆ” ಎಂದು ಆತಂಕ ವ್ಯಕ್ತಪಡಿಸಿದ್ದರು. ಆದಾಗ್ಯೂ, ಈಗ ಟ್ರಂಪ್–ಎರ್ಡೊಗನ್ ಮಾತುಕತೆಗಳಲ್ಲಿ ಬೋಯಿಂಗ್ ವಿಮಾನಗಳ ಖರೀದಿ, F-16 ಒಪ್ಪಂದಗಳು, ಮತ್ತು F-35 ಕುರಿತು ಚರ್ಚೆಗಳು ನಡೆಯಲಿದ್ದು, ಇದು ಸಕಾರಾತ್ಮಕವಾಗಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
2019ರ ನಂತರ ಎರ್ಡೊಗನ್ ಅವರ ಇದು ಮೊದಲ ಶ್ವೇತಭವನ ಭೇಟಿ. ಅಮೆರಿಕ–ಟರ್ಕಿ ಸಂಬಂಧಗಳು ಹಲವು ಅಸಮಾಧಾನಗಳಿಂದ ಸಂಕೀರ್ಣವಾಗಿದ್ದರೂ, ಟ್ರಂಪ್ ಉಭಯ ನಾಯಕರೂ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಎರ್ಡೊಗನ್ ಆಡಳಿತದ ಮಾನವ ಹಕ್ಕು ಉಲ್ಲಂಘನೆಗಳು, ರಷ್ಯಾದೊಂದಿಗೆ ಹೊಂದಿರುವ ಆಪ್ತ ಸಂಬಂಧಗಳು ಹಾಗೂ ಇಸ್ರೇಲ್–ಟರ್ಕಿ ಉದ್ವಿಗ್ನತೆ ಕುರಿತು ಅಮೆರಿಕದೊಳಗೆ ಗಂಭೀರ ಚರ್ಚೆಗಳು ಮುಂದುವರಿಯುತ್ತಿವೆ. ಆದರೂ, ಎರ್ಡೊಗನ್ ಈ ಭೇಟಿಯಿಂದ F-35 ಮೇಲಿನ ನಿರ್ಬಂಧವನ್ನು ತೆಗೆದುಹಾಕಿಸಿಕೊಳ್ಳಲು ಬಲವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ