ಮಹತ್ವದ ಜಾತಿ ಸಮೀಕ್ಷೆಗೆ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರು, ಬೆಂಬಲ ಘೋಷಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ, ಸಂತೋಷ್ ಲಾಡ್, ಮಧು ಬಂಗಾರಪ್ಪ, ಬಿ.ಎ. ಸುರೇಶ್, ವೀರಪ್ಪ ಮೊಯ್ಲಿ, ಬಿ.ಕೆ. ಹರಿಪ್ರಸಾದ್ ಸೇರಿದಂತೆ, ಹಿಂದುಳಿದ ವರ್ಗಗಳಿಗೆ ಸೇರಿದ ಹಿರಿಯ ನಾಯಕರುಗಳು, ಸಚಿವರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರುಗಳು ಭಾಗವಹಿಸಿದ್ದರು. ಈ ವೇಳೆ ಜಾತಿ ಸಮೀಕ್ಷೆಗೆ ಬೆಂಬಲ ಘೋಷಿಸುವ ಬಗ್ಗೆ ಬಹುಮತದ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಂತ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದು, ಜಾತಿಗಣತಿಯಲ್ಲಿ ಹಿಂದುಳಿದ ವರ್ಗದ ಜನರು ಸಕ್ರಿಯವಾಗಿ ಭಾಗವಹಿಸಬೇಕೆಂದು ಕರೆ ಕೊಟ್ಟಿದ್ದಾರೆ. ಜಾತಿಗಣತಿ ಸಮೀಕ್ಷೆ ಯಶಸ್ವಿಗೊಳಿಸಲು, ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕಿದೆ. ಸಮೀಕ್ಷೆ ಸಂವಿಧಾನ ಬದ್ಧವಾದ ಹಕ್ಕು. ಹಿಂದುಳಿದ ಜಾತಿಗಳು ಆರ್ಥಿಕವಾಗಿ, ರಾಜಕೀಯವಾಗಿ ಶೈಕ್ಷಣಿಕ ಸೌಲಭ್ಯ ಪಡೆಯಲು ಸಮೀಕ್ಷೆ ಅಗತ್ಯವಾಗಿದೆ ಅಂತಾ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಹಿಂದುಳಿದ ವರ್ಗವೆಂದು ಗುರುತಿಸಿಕೊಂಡ ಸಚಿವರು, ಶಾಸಕರು ಬಂದಿದ್ದಾರೆ. ಈ ಸಭೆ ಮೊದಲೇ ಆಗಬೇಕಿತ್ತು. ನಮ್ಮ ದೇಶ ಪ್ರಜಾಪ್ರಭುತ್ವದ ಅಡಿಯಲ್ಲಿ ನಡೆಯಬೇಕು. ಹಿಂದುಳಿದ ವರ್ಗಗಳಿಗೆ ಸರಿಯಾದ ಮೀಸಲಾತಿ ಸಿಗಬೇಕು. ಸಾಮಾಜಿಕ, ಶೈಕ್ಷಣಿಕ ಹಕ್ಕನ್ನು ಕಸಿಯಲು ಸಾಧ್ಯವಿಲ್ಲ. ಇದನ್ನ ವಿರೋಧಿಸುವ ಕೆಲಸ ಆಗಬಾರದು.
ಮಂಡಲ ಆಯೋಗ ಶಿಫಾರಸು ಜಾರಿ ಆದ್ಮೇಲೆ, ಹಿಂದುಳಿದ ವರ್ಗಗಳಿಗೆ ಸೆಂಟ್ರಲ್ ಸರ್ವೀಸ್‌ನಲ್ಲಿ ಮೀಸಲಾತಿ ಅವಕಾಶ ಸಿಕ್ಕಿದೆ ಎಂದು ಹೇಳಿದ್ರು. ಜೊತೆಗೆ ಸಮುದಾಯಗಳಿಗೆ ಜಾಗೃತಿ ಮೂಡಿಸಲು ತೀರ್ಮಾನ ಮಾಡಿದ್ದೇವೆ. ನಾವು ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಹಿಂದುಳಿದ ವರ್ಗಗಳ ನಾಯಕರಿಗೆ ಮನವರಿಕೆ ಮಾಡಿಕೊಡುವ ತೀರ್ಮಾನ ಮಾಡಿರೋದಾಗಿ ಹೇಳಿದ್ರು.