ಹೃದಯ ಶಸ್ತ್ರಚಿಕಿತ್ಸೆಯಂತ ತುರ್ತು ಸಂದರ್ಭದಲ್ಲಿ ಕಾರ್ಮಿಕರನ್ನು, ಆದಷ್ಟು ಬೇಗ ಆಸ್ಪತ್ರೆಗೆ ಕರೆದೊಯ್ಯುವುದು ಅಗತ್ಯವಿರುತ್ತದೆ. ಹೀಗಾಗಿ ಕಾರ್ಮಿಕರನ್ನು ಸಾಗಿಸಲು ಏರ್ ಅಂಬುಲೆನ್ಸ್ ಬಳಕೆಗೆ ಚಿಂತನೆ ನಡೆಸಲಾಗಿದೆ.
ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ನೇತೃತ್ವದಲ್ಲಿ, ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಎಚ್ಎಎಲ್ ಹೆಲಿಕಾಪ್ಟರ್ ವಿಭಾಗದ ಹಿರಿಯ ಇಂಜಿನಿಯರ್ ಮತ್ತುಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ.
ಈ ವೇಳೆ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ್, ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿಗಳಾದ ಭಾರತಿ, ಹೆಚ್ಎಎಲ್ ಹೆಲಿಕಾಪ್ಟರ್ ವಿಭಾಗ .ತಂಡದ ಮುಖ್ಯಸ್ಥರಾದ ಮಂಜುನಾಥ ತಳವಾರ್, ದೇವರಾಜ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇನ್ನು, ಏರ್ ಅಂಬುಲೆನ್ಸ್ ಸೇವೆಯಿಂದಾಗಿ ಟ್ರಾಫಿಕ್ ಜಾಮ್ ಪರದಾಟ ತಪ್ಪಲಿದ್ದು, ಸಮಯಕ್ಕೆ ಸರಿಯಾಗಿ ಅನಾರೋಗ್ಯ ಪೀಡಿತ ಕಾರ್ಮಿಕರಿಗೆ ಚಿಕಿತ್ಸೆ ಲಭ್ಯವಾಗಲಿದೆ. ಈ ಮೂಲಕ ಕಾರ್ಮಿಕರ ಜೀವ ಕಾಪಾಡುವಲ್ಲಿ, ಸಚಿವ ಸಂತೋಷ್ ಲಾಡ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.