ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯದ ಬೋಟಿಂಗ್ ಪಾಯಿಂಟ್ನಲ್ಲಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ ಕಾವೇರಿ ಆರತಿಗೆ ಸೆಪ್ಟೆಂಬರ್ 26ರಂದು ಚಾಲನೆ ಸಿಗಲಿದೆ.
ವಾರಾಣಸಿಯ ಗಂಗಾ ಆರತಿಯ ಮಾದರಿಯಲ್ಲಿ 5 ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಡಿಕೆಶಿ, ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ಥಳೀಯ ತರಬೇತಿ ಪಡೆದ ಪುರೋಹಿತರ ನೇತೃತ್ವದಲ್ಲಿ, 12–13 ಮಂದಿ ವೈದಿಕರ ತಂಡ ಈ ವೈಭವದ ಆರತಿಯನ್ನು ನೆರವೇರಿಸಲಿದ್ದಾರೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಪ್ರವಾಸಿಗರ ಅನುಕೂಲಕ್ಕಾಗಿ ಕೆಆರ್‌ಎಸ್ ಬೃಂದಾವನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಐದು ದಿನಗಳ ಕಾಲ ಟೋಲ್ ಶುಲ್ಕದಲ್ಲಿಯೂ ವಿನಾಯಿತಿ ಇರಲಿದೆ.
ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗರಿಗೂ ಉಚಿತ ಲಾಡು ಪ್ರಸಾದ ವಿತರಿಸಲಾಗುವುದು. ಡಿಕೆಶಿವಕುಮಾರ್ ಅವರ ನಿರ್ದೇಶನದಂತೆ ಪ್ರತಿದಿನ ಪ್ರಸಾದ ವಿತರಣೆಗೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.
ಇದೇ ವೇಳೆ, ಕೆಆರ್‌ಎಸ್ ಬೃಂದಾವನ ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರಗೊಂಡಿದ್ದು, ಬಣ್ಣ ಬಣ್ಣದ ಬೆಳಕುಗಳಲ್ಲಿ ಕಂಗೊಳಿಸುತ್ತಿದೆ. ಕಾವೇರಿ ಆರತಿಯ ಸಂಭ್ರಮದಲ್ಲಿ ಕೆಆರ್‌ಎಸ್ ಹೊಸ ರೂಪದಲ್ಲಿ ಕಣ್ಮನ ಸೆಳೆಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ