ಕಣ್ಣು ಹಾಯಿಸಿದಷ್ಟು ದೂರ ಯುವಕರು.. ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಕಿಚ್ಚು.. ನಿಜಕ್ಕೂ ಇದೊಂದು ವಿಡಿಯೋ ಅತಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಧಾರವಾಡದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳ ಈ ವಿಡಿಯೋ ತುಂಬಾ ವೈರಲ್ ಆಗಿದೆ.
ನಿನ್ನೆ ಧಾರವಾಡದಲ್ಲಿ ಸರ್ಕಾರದ ವಿರುದ್ಧ ಯುವಶಕ್ತಿ ಸಿಡಿದೆದ್ದ ದೃಶ್ಯ ಇದು. ಸಾವಿರಾರು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಇವರ ಆಗ್ರಹ, ಕೂಗು ಒಂದೇ ಆಗಿತ್ತು. ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಇದರಿಂದ ನಿರುದ್ಯೋಗ ಹೆಚ್ಚಾಗಿದೆ. ರಾಜ್ಯ ಸರ್ಕಾರ ವಯೋಮಿತಿ ಹೆಚ್ಚಳ ಮಾಡಿ ಉದ್ಯೋಗ ನೀಡಬೇಕು. ಹೀಗೆಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಬೃಹತ್ ಪ್ರತಿಭಟನೆಯಲ್ಲಿ ಒತ್ತಾಯಿಸಿದೆ.
ಧಾರವಾಡದಲ್ಲಿ ನಡೆದ ಈ ಹೋರಾಟದ ವಿಡಿಯೋ ಹೊಸ ಕಿಚ್ಚು ಹೊತ್ತಿಸಿದೆ. ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಬಿಜೆಪಿ ರಾಜ್ಯದ ಯುವಕರ ಆಕ್ರೋಶ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ. ಖಾಲಿ ಹುದ್ದೆಗಳ ಭರ್ತಿ ಮಾಡದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಬೀದಿಗೆ ಇಳಿದಿದ್ದಾರೆ. ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ ಎಂದು ಒತ್ತಾಯಿಸಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕರ್ನಾಟಕ ಲೋಕ ಸೇವಾ ಆಯೋಗ ಎಂಬ ಭ್ರಷ್ಟ ಸಂಸ್ಥೆಯಿಂದ ಉದ್ಯೋಗ ವಿಳಂಬವಾಗಿದೆ. ನ್ಯಾಯುತವಾದ ಯಾವುದೇ ಬೇಡಿಕೆಗೆ ನನ್ನ ಬೇಷರತ್ ಬೆಂಬಲವಿರುತ್ತದೆ. ಸರ್ಕಾರ ಮತ್ತೊಮ್ಮೆ ತನ್ನ ಉಡಾಫೆ ಧೋರಣೆ ತೋರಿಸಿದರೆ ಯುವ ಸಮೂಹದೊಂದಿಗೆ ಧರಣಿ ಕೂರುತ್ತೇನೆ ಎಂದು ಎಚ್ಚರಿಸಿದ್ದಾರೆ.
ಜೆಡಿಎಸ್ ಪಕ್ಷ ಕೂಡ ಧಾರವಾಡದ ವಿಡಿಯೋ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಯುವ ಸಮುದಾಯ ತಿರುಗಿಬಿದ್ದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 6 ತಿಂಗಳಲ್ಲೇ ನೇಮಕಾತಿ ಪ್ರಕ್ರಿಯೆಗಳನ್ನು ಶುರು ಮಾಡುತ್ತೇವೆ. ಯುವಜನತೆಗೆ ವರ್ಷಕ್ಕೆ 2.5 ಲಕ್ಷ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಯಾಮಾರಿಸಿ 2.5 ವರ್ಷ ಕಳೆದಿದೆ. ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿರುವ ಸಿದ್ದರಾಮಯ್ಯನವರೇ, ಇನ್ನಾದರೂ ಸರ್ಕಾರದ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಾರಂಭಿಸಿ, ಉದ್ಯೋಗಕಾಂಕ್ಷಿಗಳಿಗೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದೆ.
ನೇಪಾಳದಲ್ಲಿ Gen-Z ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ನೆರೆಯ ದೇಶದಲ್ಲಿ ನಡೆದ Gen-Z ಹೋರಾಟದಂತೆ ಧಾರವಾಡದ ಈ ದೃಶ್ಯವೂ ಸಾಕ್ಷಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ರಾಜ್ಯದಲ್ಲೂ Gen-Z ಹೋರಾಟ ಎಂದೇ ಈ ವಿಡಿಯೋವನ್ನು ವೈರಲ್ ಮಾಡಲಾಗುತ್ತಿದೆ. ನೆಟ್ಟಿಗರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.



