ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರದ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಆರ್. ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಹಿಂದೆ ದೇವಸ್ಥಾನಗಳನ್ನು ವಂಶಪಾರಂಪರ್ಯವಾಗಿ ನಡೆಸಲಾಗುತ್ತಿತ್ತು. ನಂತರ ಕುಟುಂಬಗಳಲ್ಲಿ ವ್ಯಾಜ್ಯಗಳು ಹೆಚ್ಚಾಗುತ್ತಿದ್ದಂತೆ, ಬ್ರಿಟಿಷರ ಕಾಲದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಮುಜರಾಯಿ ಇಲಾಖೆ ಪ್ರಾರಂಭವಾಯಿತು. ವಂಶಪಾರಂಪರ್ಯದ ದೇವಸ್ಥಾನಗಳನ್ನು ಸರ್ಕಾರದ ವ್ಯಾಪ್ತಿಗೆ ತರಲು ಪ್ರಧಾನ ಮಂತ್ರಿ ಮೋದಿ ದೇಶವ್ಯಾಪಿ ಕಾಯ್ದೆ ತಂದರೆ ಅದು ಎಲ್ಲರಿಗೂ ಅನ್ವಯವಾಗಲಿದೆ. ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರದ ಕೆಲಸ ಎಂದರು.
ರಾಜ್ಯದಾದ್ಯಂತ ಸುಮಾರು 35,500 ಸಿ-ಗ್ರೇಡ್ ದೇವಸ್ಥಾನಗಳು ಮುಜರಾಯಿ ಇಲಾಖೆಯಡಿ ಇವೆ ಎಂದು ಅವರು ತಿಳಿಸಿದರು. ಹಿಂದಿನಿಂದ ಇವುಗಳ ಅಭಿವೃದ್ಧಿಗೆ ಗಮನ ಹರಿಸಲಿಲ್ಲ. ನಮ್ಮ ಸರ್ಕಾರವು ಈ ದೇವಸ್ಥಾನಗಳು ಮತ್ತು 40 ಸಾವಿರಕ್ಕೂ ಹೆಚ್ಚು ಅನುವಂಶಿಕ ಅರ್ಚಕರ ಹಿತದೃಷ್ಟಿಯಿಂದ ವಿಧೇಯಕ ತಂದಿದೆ. ಆದರೆ ಬಿಜೆಪಿಗರು ಇದಕ್ಕೆ ವಿರೋಧಿಸುತ್ತಿದ್ದಾರೆ. ಧರ್ಮ, ದೇವರ ಹೆಸರಿನಲ್ಲಿ ಮತ ಕೇಳುವವರು, ದೇವಾಲಯಗಳ ಅಭಿವೃದ್ಧಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 205 ಎ-ಗ್ರೇಡ್ ಹಾಗೂ 193 ಬಿ-ಗ್ರೇಡ್ ದೇವಸ್ಥಾನಗಳು ಇದ್ದು, ಪ್ರತಿಯೊಂದು ದೇವಸ್ಥಾನಕ್ಕೂ ಅಧ್ಯಕ್ಷರು ಮತ್ತು ಎಂಟು ಮಂದಿ ಸದಸ್ಯರ ಸಮಿತಿ ಇದೆ. ದೇವಸ್ಥಾನದ ಆದಾಯವನ್ನು ಅವರೇ ನಿರ್ವಹಿಸುತ್ತಾರೆ. ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ” ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

