Friday, December 5, 2025

Latest Posts

ಬಿಡದಿ ರೈತರ ದಂಗಲ್- ಅಖಾಡಕ್ಕೆ HDD ಎಂಟ್ರಿ ! : ರೈತರ ಹೋರಾಟಕ್ಕೆ ದಳಪತಿ ಆಗಮನ

- Advertisement -

ಬಿಡದಿಯಲ್ಲಿ ಟೌನ್‌ಶಿಪ್ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾಧೀನಕ್ಕೆ ವಿರೋಧವಾಗಿ ರೈತರು ಕಳೆದ 13 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಈಗ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸೇರಿದಂತೆ ಹಲವು ದಳಪತಿಗಳು ಬೆಂಬಲ ನೀಡಲು ಆಗಮಿಸುತ್ತಿದ್ದು, ಹೋರಾಟದ ಕಿಚ್ಚು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಮಾಡಲಾಗುತ್ತಿದೆ. ವಿರೋಧ ಪಕ್ಷದ ನಾಯಕ ಆರ್‌. ಅಶೋಕ್, ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ, ಸಂಸದ ಡಾ. ಸಿ.ಎನ್. ಮಂಜುನಾಥ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ರೈತರಿಗೆ ಈಗಾಗಲೇ ಬೆಂಬಲ ನೀಡಿದ್ದಾರೆ. ದೇವೇಗೌಡರನ್ನು ಹೋರಾಟಕ್ಕೆ ಕರೆತರಲು ಜೆಡಿಎಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದು, ಬೈರಮಂಗಲದಲ್ಲಿ ಬೃಹತ್‌ ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ಆಯೋಜನೆಗೆ ಯೋಜನೆ ರೂಪಿಸಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ದೆಹಲಿಯಿಂದ ವರ್ಚುವಲ್ ಮೂಲಕ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಹೋರಾಟವನ್ನು ತೀವ್ರಗೊಳಿಸಲು ರೈತರು ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಹಾಗೂ ಸಹಕಾರಿ ಸಂಘಗಳಲ್ಲಿ ಭೂಸ್ವಾಧೀನದ ವಿರುದ್ಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದಾರೆ. ಜೊತೆಗೆ, ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ತಮ್ಮ ಆಕ್ರೋಶ ತೋರಿಸುತ್ತಿದ್ದಾರೆ. ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭೂಮಿ ಕೊಡಬಾರದು ಎಂಬ ಪ್ರತಿಜ್ಞೆ ಕೈಗೊಂಡಿದ್ದಾರೆ. ಸೆಪ್ಟೆಂಬರ್ 28ರಂದು ದೇವೇಗೌಡ, ನಿಖಿಲ್‌ ಕುಮಾರಸ್ವಾಮಿ ಹಾಗೂ ಜೆಡಿಎಸ್‌ನ ಅನೇಕ ಹಾಲಿ-ಮಾಜಿ ಶಾಸಕರು ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ. ಮಂಜುನಾಥ್ ಅವರು ಸ್ಥಳೀಯ ಶಾಸಕ ಬಾಲಕೃಷ್ಣರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಜನರ ದುಃಖ ತಿಳಿಯದ, ಮಾತಾಡದ ಜನಪ್ರತಿನಿಧಿ ಎಂದು ವಾಗ್ದಾಳಿ ನಡೆಸಿದ್ದಾರೆ.\

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss