ಮೂವರು ಸುಳ್ಳು ಹೇಳಿಸಿದ್ರು ಇಷ್ಟಕ್ಕೆಲ್ಲಾ ಅವರೇ ಕಾರಣ..

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿದ್ದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ಸ್ವಇಚ್ಛಾ ಹೇಳಿಕೆ ವೇಳೆ ಉಲ್ಟಾ ಹೊಡೆದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ನ್ಯಾಯಾಲಯದಲ್ಲಿ, ಕಳೆದ 2 ದಿನಗಳಿಂದ ಚಿನ್ನಯ್ಯನ ಹೇಳಿಕೆ ದಾಖಲು ಮಾಡಿಕೊಳ್ಳಲಾಗ್ತಿದೆ.

ಬಿಎನ್‌ಎಸ್‌ 183ರ ಅಡಿಯಲ್ಲಿ ಚಿನ್ನಯ್ಯನ ಸ್ವಇಚ್ಛಾ ಹೇಳಿಕೆಗಳನ್ನು ದಾಖಲಿಸಲಾಗಿದೆ. ಸುಮಾರು ಏಳೂವರೆ ಗಂಟೆಗಳ ಕಾಲ ಪ್ರಕ್ರಿಯೆ ನಡೆದಿದ್ದು, ಸೆಪ್ಟೆಂಬರ್‌ 23ರಂದು 11 ಪುಟ, ಸೆಪ್ಟೆಂಬರ್‌ 25ರಂದು 23 ಪುಟಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ.

ಈ ಹಿಂದೆ ಹೇಳಿದ್ದು ಸುಳ್ಳು. ಕೆಲವರ ಷಡ್ಯಂತ್ರದಿಂದ ಸುಳ್ಳು ಹೇಳಿದ್ದೇನೆ. ತಿಮರೋಡಿ, ಮಟ್ಟಣ್ಣವರ್‌, ಜಯಂತ್ ಸೇರಿ ಷಡ್ಯಂತ್ರ ಮಾಡಿದ್ದಾರೆ. ಒತ್ತಡ, ಬೆದರಿಕೆ ಹಾಕಿದ್ರಿಂದ ಸುಳ್ಳು ಹೇಳಿದ್ದೇನೆ. ನನ್ನ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ರು. ಸುಮಾರು 8ಕ್ಕೂ ಹೆಚ್ಚು ವಿಡಿಯೋ ಮಾಡಿಕೊಂಡಿದ್ದಾರೆ.

ವಿಡಿಯೋದಲ್ಲಿ ಹೇಳಿದಂತೆಯೇ ನ್ಯಾಯಾಲಯದಲ್ಲೂ ಹೇಳಿಕೆ ನೀಡ್ಬೇಕು. ಎಸ್‌ಐಟಿ ಮುಂದೆಯೂ ಇದನ್ನೇ ಹೇಳುವಂತೆ ಹೇಳಿದ್ರು. ಮೂರು ಜನ ನನಗೆ ಬುರುಡೆ ಕೊಟ್ಟು ಸುಳ್ಳು ಹೇಳಿಸಿದ್ರು. ಅವರ ಮಾತು ನಂಬಿ ತಪ್ಪು ಮಾಡಿದ್ದೇನೆ. ಈಗ ನನಗೆ ತಪ್ಪಿನ ಅರಿವಾಗಿ ಸತ್ಯ ಹೇಳುತ್ತಿದ್ದೇನೆ.

ನಾನು ಆತ್ಮಹತ್ಯೆ ಮಾಡಿಕೊಂಡಿರುವವರು, ಕ್ಲೈಮ್‌ ಮಾಡಿಕೊಳ್ಳದ ಶವಗಳು, ಗುರುತು ಪತ್ತೆಯಾಗದ ಶವಗಳನ್ನು, ಹೂತು ಹಾಕಿದ್ದೇನೆ. ಕಾನೂನು ರೀತಿಯಲ್ಲೇ ಎಲ್ಲವೂ ನಡೆದಿದೆ ಎಂಬ ಅಂಶವನ್ನು ಹೇಳಿದ್ದಾನೆ. ಈ ಹಿಂದೆ ಹೇಳಿದ್ದ ಹೇಳಿಕೆಗಳಿಗೆ ಸಂಪೂರ್ಣ ವಿರುದ್ಧವಾಗಿ, ಇದೀಗ ಹೇಳಿಕೆಗಳನ್ನು ಕೊಡುತ್ತಿದ್ದಾನೆ. ಸ್ವಇಚ್ಛಾ ಹೇಳಿಕೆ ವೇಳೆ ಚಿನ್ನಯ್ಯ ಯೂಟರ್ನ್‌ ಹೊಡೆದಿದ್ದು, ಜಡ್ಜ್‌ ಎದುರು ಕಣ್ಣೀರು ಹಾಕಿದ್ದಾನೆ.

About The Author