Monday, November 17, 2025

Latest Posts

ಕಲಬುರಗಿಯಲ್ಲಿ ಮಳೆಗೆ ಜನಜೀವನ ಅಸ್ತವ್ಯಸ್ತ – ಶಾಲೆಗಳಿಗೆ ರಜೆ ಘೋಷಣೆ!

- Advertisement -

ರಾಜ್ಯದಾದ್ಯಂತ ಮಳೆರಾಯನ ಆರ್ಭಟ ಶುರುವಾಗಿದೆ. ಎಲ್ಲೆಡೆ ಪ್ರವಾಹಗಳು ಸಂಭವಿಸುತ್ತಿವೆ. ಕಲಬುರಗಿ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಲಬುರಗಿ ಜಿಲ್ಲೆಯಲ್ಲಿ ಹಲವು ಸೇತುವೆಗಳು ಜಲಾವೃತಗೊಂಡಿವೆ. ಹವಾಮಾನ ಇಲಾಖೆ ಮುಂದಿನ 48 ಗಂಟೆಗಳ ಕಾಲ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್ 27 ಮತ್ತು 28 ರಂದು ಎರಡು ದಿನಗಳ ಕಾಲ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಜಿಲ್ಲಾ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ದಸರಾ ರಜೆಯ ನಡುವೆಯೂ ಕೆಲವು ಶಾಲೆಗಳ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಳೆಯಿಂದಾಗಿ ಚಂದ್ರಂಪಳ್ಳಿ ಜಲಾಶಯಕ್ಕೆ 7,500 ಕ್ಯೂಸೆಕ್ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಸಂಭವಿಸಿದೆ. ತಕ್ಷಣವಾಗಿ ಮೂರು ಗೇಟುಗಳನ್ನು ತಲಾ 10 ಅಡಿ ಅಷ್ಟು ತೆರೆದು ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಚಂದ್ರಂಪಳ್ಳಿ ಕೂಡು ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಸೇತುವೆ ಸಂಪರ್ಕ ಕಡಿದುಕೊಂಡಿದೆ. ಗ್ರಾಮಸ್ಥರು ಜಾಗೃತರಾಗಿ ಎಚ್ಚರಿಕೆಯಿಂದ ವರ್ತಿಸಬೇಕೆಂದು ಯೋಜನಾಧಿಕಾರಿ ಚೇತನ ಕಳಸ್ಕರ್ ಮನವಿ ಮಾಡಿದ್ದಾರೆ.

ಶನಿವಾರ ಬೆಳಿಗ್ಗೆಯಿಂದಲೇ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಚಂದಾಪುರ, ಗಾರಂಪಳ್ಳಿ, ಅಣವಾರ, ಕಲ್ಲೂರು, ಕನಕಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಈ ಪರಿಣಾಮವಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಎಲ್ಲಾ ಇಲಾಖೆಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಬಡಾವಣೆಗಳಲ್ಲಿ ನದಿ-ನಾಲೆಗಳ ಬಳಿಯಲ್ಲಿ ವಾಸಿಸುತ್ತಿರುವ ಜನರಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss