ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಭಾರತದ ಛೀಮಾರಿ : ವಿಶ್ವ ವೇದಿಕೆಯಲ್ಲಿ ಪಾಕ್ ಕುತಂತ್ರ ಬಯಲು‌

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವಿವಾದಾತ್ಮಕ ಭಾಷಣ ಮಾಡಿ ಭಾರತವನ್ನು ಟೀಕಿಸಿದ ಹಿನ್ನೆಲೆಯಲ್ಲಿ, ಭಾರತವು ತೀವ್ರ ತಿರುಗೇಟು ನೀಡಿದೆ. ಶೆಹಬಾಜ್ ಷರೀಫ್ ಅವರು, ಭಾರತ–ಪಾಕಿಸ್ತಾನ ಯುದ್ಧದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸದಿದ್ದರೆ ಘೋರ ಯುದ್ಧ ಉಲ್ಬಣವಾಗುತ್ತಿತ್ತು, ಟ್ರಂಪ್ ಶಾಂತಿ ಪ್ರಿಯ ವ್ಯಕ್ತಿ, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಪ್ರಸ್ತಾಪಿಸಿದರು.

ಇದೇ ಸಂದರ್ಭದಲ್ಲಿ, ಭಾರತದ ವಿರುದ್ಧ ಪಾಕಿಸ್ತಾನ ಸೇನೆಯ ಶೌರ್ಯವನ್ನು ಹೊಗಳಿದ ಶೆಹಬಾಜ್, ನಮ್ಮ ಸೇನೆ ಭಾರತೀಯ ಯುದ್ಧವಿಮಾನಗಳನ್ನು ಹೊಡೆದುರುಳಿಸಿತು, ನಮ್ಮ ನಗರಗಳ ಮೇಲೆ ದಾಳಿ ನಡೆದಾಗ ಅದನ್ನು ತಡೆಗಟ್ಟಿದೆ ಎಂದು ಹೇಳಿದರು. ಭಾರತ ಅಪ್ರಚೋದಿತ ದಾಳಿ ನಡೆಸಿ ನಮ್ಮ ನಾಗರಿಕರನ್ನು ಗುರಿಯಾಗಿಸಿಕೊಂಡಿತು ಎಂದು ಆರೋಪಿಸಿದರು. ಈ ಹೇಳಿಕೆಗಳು ಪಾಕಿಸ್ತಾನದ ಸೇನೆಯ ಶಕ್ತಿಯನ್ನು ತೋರಿಸಲು ಮಾಡಿದ ರಾಜಕೀಯ ಪ್ರಯತ್ನವಾಗಿತ್ತು.

ಆದರೆ ಭಾರತದ ಪ್ರತಿನಿಧಿ ಪೆಟಲ್ ಗಹ್ಲೋಟ್ ತೀವ್ರವಾಗಿ ಪ್ರತಿಕ್ರಿಯಿಸಿದರು. ಭಯೋತ್ಪಾದಕರನ್ನು ವೈಭವೀಕರಿಸುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಕೇಂದ್ರಬಿಂದು ಎಂದೂ, ಪಹಲ್ಗಾಮ್ ದಾಳಿಗೆ ಕಾರಣವಾದ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯನ್ನು ಪಾಕಿಸ್ತಾನ ಬೆಂಬಲಿಸುತ್ತಿದೆ ಎಂದು ಬಯಲುಮಾಡಿದರು. ಜೊತೆಗೆ, ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ ರಾಷ್ಟ್ರವಾಗಿ ಪಾಕಿಸ್ತಾನದ ಕುತಂತ್ರವನ್ನು ವಿಶ್ವ ವೇದಿಕೆಯಲ್ಲಿ ಹೊರಹಾಕಿ, ಪಾಕಿಸ್ತಾನವು ಜಾಗತಿಕ ಶಾಂತಿಗೆ ಧಕ್ಕೆ ತರುತ್ತಿದೆ ಎಂದು ಭಾರತ ಎಚ್ಚರಿಕೆ ನೀಡಿತು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author