ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್ ಸರ್ಕಾರ, ಜಾತಿ ಸಮೀಕ್ಷೆ ನಡೆಸುತ್ತಿದೆ ಅನ್ನೋ ಮಾತುಗಳು ವಿಪಕ್ಷಗಳಿಂದ ಕೇಳಿ ಬಂದಿದೆ. ಇದಕ್ಕೆಲ್ಲಾ ಖುದ್ದು ಡಿಸಿಎಂ ಡಿ.ಕೆ. ಶಿವಕುಮಾರ್ ತೆರೆ ಎಳೆದಿದ್ದಾರೆ. ಜಾತಿ ಆಧಾರಿತ ಜನಗಣತಿ ಮಾಡುತ್ತಿರುವುದು ಗ್ಯಾರಂಟಿ ಕಡಿತಕ್ಕೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಇದೆಲ್ಲಾ ಸುಳ್ಳು ಅಂತಾ ಸ್ಪಷ್ಟಪಡಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಯಾರೂ ಸಹ ನಿಲ್ಲಿಸಲು ಆಗುವುದಿಲ್ಲ. ಮುಂದೆ ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆಗಳು ನಿಲ್ಲಿಸಲು ಆಗುವುದಿಲ್ಲ. ಗ್ಯಾರಂಟಿ ಯೋಜನೆಗಳು ನಮ್ಮ ರಾಜ್ಯದ ಜನರಿಗೆ ಬದುಕನ್ನು ಕಟ್ಟಿಕೊಡುತ್ತಿವೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಇಡೀ ಭಾರತ ದೇಶಕ್ಕೇ ಗ್ಯಾರಂಟಿಯಿದ್ದಂತೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು, ಸಚಿವ ಶಿವರಾಜ್ ತಂಗಡಗಿ ಕೂಡ, ಬಿಜೆಪಿಗರ ವಿರುದ್ಧ ಗುಡುಗಿದ್ದಾರೆ. ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಅನ್ನೋದಕ್ಕೆ ಇದು ಉದಾಹರಣೆ. ಈಗಾಗಲೇ 56 ಲಕ್ಷ ಜನರ ಸಮೀಕ್ಷೆ ಮಾಡಲಾಗಿದೆ. ಹೈಕೋರ್ಟ್ ಹೇಳಿದ ಮೇಲೆ ಸಮೀಕ್ಷೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಜಾತಿ ಗಣತಿ ಮಾಡೋವಾಗ ನಾನು ಭಾಗಿಯಾಗಲ್ಲ ಅನ್ನೋಕಾಗುತ್ತಾ ಎಂದು ಪ್ರಶ್ನಿಸಿದ್ದಾರೆ.