ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿರುದ್ಧ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಂಸದ ತೇಜಸ್ವಿ ಸೂರ್ಯ ಇಬ್ಬರೂ ತಮ್ಮ ಮನೆಗೆ ಸಮೀಕ್ಷೆದಾರರು ಬಂದರೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.
ಹುಬ್ಬಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಸಮೀಕ್ಷೆಯಲ್ಲಿ ಅನಗತ್ಯ ಮಾಹಿತಿಗಳನ್ನು ಕೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೈನಂದಿನ ಆದಾಯ, ಮನೆಯಲ್ಲಿ ವಿಧವೆಯರಿದ್ದಾರೆಯೇ, ಜಾತಿ ತಾರತಮ್ಯ ಅನುಭವಿಸಿದ್ದೀರಾ, ಯಾವುದಾದರೂ ಸಂಘಟನೆ ಸದಸ್ಯತ್ವವಿದೆಯೇ, ಇಂತಹ ಪ್ರಶ್ನೆಗಳೆಲ್ಲ ಸರ್ಕಾರಕ್ಕೆ ಏಕೆ ಬೇಕು? ಎಂದು ಪ್ರಶ್ನಿಸಿದರು. ಈ ಹಿಂದೆ ನಡೆದ ಸಮೀಕ್ಷೆಯ ಮಾಹಿತಿಯೇ ಹೊರಗೆ ಹರಡಿದರೆ, ಈಗ ಸಂಗ್ರಹವಾಗುತ್ತಿರುವ ದತ್ತಾಂಶ ಎಷ್ಟು ಸುರಕ್ಷಿತವಾಗಿರಲಿದೆ ಎಂಬ ಅನುಮಾನವಿದೆ. ಇದನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದರು.
ಸಮೀಕ್ಷೆಯಲ್ಲಿ ಎಲ್ಲ ಜಾತಿಗಳನ್ನು ಒಳಗೊಂಡಿದ್ದರೂ, ಹೈಕೋರ್ಟ್ ಜನರನ್ನು ಬಲವಂತವಾಗಿ ಪಾಲ್ಗೊಳ್ಳುವಂತೆ ಒತ್ತಾಯಿಸಬೇಡಿ ಎಂದು ಹೇಳಿದರೂ ಗಣತಿದಾರರು ಒತ್ತಡ ಹೇರುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು. ಆಡಳಿತ ವೈಫಲ್ಯ, ಪಕ್ಷದ ಕಲಹ, ಅಕ್ಟೋಬರ್‌ನಲ್ಲಿ ಅಧಿಕಾರ ಹಸ್ತಾಂತರದ ಗೊಂದಲ, ಇವೆಲ್ಲವನ್ನು ಮರೆಮಾಚಲು ಕಾಂಗ್ರೆಸ್ ಈ ಸಮೀಕ್ಷೆ ನಡೆಸುತ್ತಿದೆ. ಇದು ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಮಾಡಿದ ಪ್ರಯತ್ನ ಮಾತ್ರ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸಮಾಜ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾನು ಭಾಗವಹಿಸುವುದಿಲ್ಲ. ಜನರೂ ಕೂಡ ಬಹಿಷ್ಕರಿಸಬೇಕು. ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟುಮಾಡಿ, ರಾಜಕೀಯ ಲಾಭ ಪಡೆಯಲು ಸರ್ಕಾರ ಯತ್ನಿಸುತ್ತಿದೆ. ಇದರಿಂದ ಬಡವರಿಗೆ ಯಾವುದೇ ಪ್ರಯೋಜನವಿಲ್ಲ. ಸಿದ್ದರಾಮಯ್ಯನವರ ಸಮೀಕ್ಷೆಯನ್ನು ಜನರು ತಿರಸ್ಕರಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಜಾತಿಗಣತಿ ಮೂಲಕ ಸಿದ್ದರಾಮಯ್ಯ ಲಾಲು ಪ್ರಸಾದ್ ಯಾದವ್ ಅಥವಾ ಮುಲಾಯಂ ಸಿಂಗ್ ಯಾದವ್ ಮಾದರಿಯಲ್ಲಿ ಜಾತಿ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಹೈಕೋರ್ಟ್ ಆದೇಶದ ನಂತರ ಈ ಪ್ರಯತ್ನ ಪ್ರಾರಂಭದಲ್ಲೇ ವಿಫಲವಾಗಿದೆ ಎಂದರು. ಸಮೀಕ್ಷೆಯಲ್ಲಿ ಸಾರ್ವಜನಿಕರು ಭಾಗವಹಿಸುವುದು ಕಡ್ಡಾಯವಲ್ಲ. ಈ ಸರ್ಕಾರ ನನ್ನ ಡೇಟಾವನ್ನು ಸುರಕ್ಷಿತವಾಗಿ ಇಡುತ್ತದೆಯೇ? ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತದೆ? ನನಗೆ ನಂಬಿಕೆ ಇಲ್ಲ. ಆದ್ದರಿಂದ ನಾನಂತು ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ