ಮೈಸೂರು: ರಾಜಧಾನಿ ಬೆಂಗಳೂರಿನಲ್ಲಿ ಲಾರಿಗಳ ಅತಿವೇಗಕ್ಕೆ ಮತ್ತೆ ಪ್ರಾಣ ಬಲಿಯಾಗಿದೆ. ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೂದಿಗೆರೆ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾಲೇಜು ವಿದ್ಯಾರ್ಥಿನಿ ಧನುಶ್ರೀ ದುರ್ಮರಣ ಹೊಂದಿದ್ದಾರೆ.
ರಸ್ತೆಯ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿದ ಲಾರಿ, ಸ್ಕೂಟಿಗೆ ಡಿಕ್ಕಿ ಹೊಡೆದು ಹರಿದ ಪರಿಣಾಮ 22 ವರ್ಷದ ವಿದ್ಯಾರ್ಥಿನಿ ಧನುಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ತೀವ್ರತೆಗೆ ತಲೆಗೆ ಭಾರೀ ಗಾಯವಾಗಿ ಛಿದ್ರಗೊಂಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಕೆ.ಆರ್.ಪುರ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೂದಿಗೆರೆ ಕ್ರಾಸ್ ರಸ್ತೆಯಲ್ಲಿನ ಭಾರಿ ಗುಂಡಿಗಳೇ ಈ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ. ನಗರದ ಗುಂಡಿಗಳೇ ವಾಹನ ಸವಾರರ ಜೀವ ಕಸಿಯುತ್ತಿವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಜೀವ ಉಳಿಸಬೇಕಾದ ಹೊಣೆಗಾರಿಕೆ ಇರುವ ಬಿಬಿಎಂಪಿ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಗುಂಡಿ ಮುಚ್ಚುವ ಕೆಲಸವನ್ನು ತ್ವರಿತವಾಗಿ ಕೈಗೊಳ್ಳದಿರುವುದಕ್ಕೆ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲವೂ ನಿಧಾನ… ನಿಧಾನವೇ ಪ್ರಧಾನ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

