ಭೀಮಾ ನದಿ ಪ್ರವಾಹ ಆರ್ಭಟ – ತತ್ತರಿಸಿದ ಉತ್ತರ ಕರ್ನಾಟಕ

ಪ್ರವಾಹದ ಹೊಡೆತಕ್ಕೆ ಉತ್ತರ ಕರ್ನಾಟಕ ತತ್ತರಿಸಿ ಹೋಗಿದೆ. ಉತ್ತರ ಕರ್ನಾಟಕದಲ್ಲಿ ಭೀಮಾ ನದಿ ಸೇರಿದಂತೆ ಹಲವು ನದಿಗಳು ಭೋರ್ಗರೆಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಗ್ರಾಮಗಳು ಮುಳುಗಡೆಯಾಗಿವೆ. ದೇವಸ್ಥಾನಗಳು ಮತ್ತು ಮನೆಗಳಿಗೂ ಜಲದಿಗ್ಬಂಧನ ಎದುರಾಗಿದೆ. ಕುಡಿಯುವ ನೀರಿಲ್ಲದೇ ಜನ ಪರದಾಡುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದರವಾಡ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿದೆ. SDRF ಸಿಬ್ಬಂದಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ಬಾಣಂತಿ ಮತ್ತು 2 ತಿಂಗಳ ಮಗುವನ್ನೂ ರಕ್ಷಿಸಲಾಗಿದೆ. ಇನ್ನೊಂದೆಡೆ ಊರಿಗೇ ಊರೇ ಮುಳುಗಡೆಯಾಗಿವೆ. ಭೀಮಾ ನದಿ ಪ್ರವಾಹಕ್ಕೆ ಕಲಬುರ್ಗಿಯ ಜನ ಊರನ್ನೇ ತೊರೆಯುತ್ತಿದ್ದಾರೆ. ಮಂದರವಾಡ ಗ್ರಾಮಸ್ಥರು ಕಳೆದ ಮೂರು ದಿನದಿಂದ ಪ್ರವಾಹದಲ್ಲಿ ಸಿಲುಕಿದ್ದರು.

ಸದ್ಯ ಎಸ್‌ಡಿಆರ್‌ಎಫ್ ಸಿಬ್ಬಂದಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಅನೇಕರನ್ನ ಬೋಟ್‌ಗಳಲ್ಲಿ ರಕ್ಷಣೆ ಮಾಡಲಾಗುತ್ತಿದೆ. ಸುಮಾರು ನೂರು ಮನೆಗಳು ಜಲಾೃತಗೊಂಡಿವೆ. ಜೇವರ್ಗಿ ಬಳಿಯ ಸೇತುವೆ ಬಂದ್ ಆಗಿರುವುದರಿಂದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 30 ಕ್ಕೆ ವೈಮಾನಿಕ ಸಮೀಕ್ಷೆ ನಡೆಸೋಕೆ ಸಿಎಂ ಸಿದ್ದರಾಮಯ್ಯ ಕಲಬುರಗಿಯತ್ತ ಸಾಗಲಿದ್ದಾರೆ. ಕಲಬುರಗಿ ಜಿಲ್ಲೆಯ ಸದ್ಯದ ಸ್ಥಿತಿಯನ್ನ ವೀಕ್ಷಿಸಲಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author